ಗದಗ: ಅಸುಂಡಿಯಲ್ಲಿ ವಿದ್ಯುನ್ಮಾನ ಮತಯಂತ್ರದ ಪ್ರಾತ್ಯಕ್ಷಿಕೆ, ವಿ.ವಿ.ಪ್ಯಾಟ ಮೂಲಕ ಮತದಾನ ಖಚಿತ ಪಡಿಸಿಕೊಳ್ಳಿ- ರಾಘವೇಂದ್ರ ರಾಜ್

23GDG09
Published on

ಗದಗ: ಅರ್ಹ ಮತದಾರರು ಚಲಾಯಿಸುವ ಮತವು ತಾವು ಚಲಾಯಿಸಿದ ಪಕ್ಷ ಅಥವಾ ವ್ಯಕ್ತಿಗೆ ದಾಖಲಾದ ಬಗ್ಗೆ ಖಾತರಿಪಡಿಸಿಕೊಳ್ಳಲು ವಿ.ವಿ.ಪ್ಯಾಟ ಯಂತ್ರ ಸಹಕಾರಿಯಾಗಿದೆ ಎಂದು ಗದಗ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ರಾಜ್ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಗದಗ ತಾಲೂಕಿನ ಅಸುಂಡಿ ಗ್ರಾಮದ ಮತಗಟ್ಟೆ ಸಂಖ್ಯೆ 148 ರಲ್ಲಿ ಆಯೋಜಿಸಲಾದ ವಿದ್ಯುನ್ಮಾನ ಮತಯಂತ್ರದ  ಬಳಕೆ ಕುರಿತು ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕರಿಗೆ ಪ್ರಸ್ತುತಪಡಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಧ್ಯುನ್ಮಾನ ಮತಯಂತ್ರದ ಮೂಲಕ ಮತ ಚಲಾಯಿಸಲು ಅನುಕೂಲವಾಗುವಂತೆ ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ವಿದ್ಯುನ್ಮಾನ ಮತಯಂತ್ರದ ಬಳಕೆಯ ಪ್ರತಿ ಹಂತಗಳನ್ನು ವಿವರಿಸಿ ಪ್ರಾತ್ಯಕ್ಷಿಕೆಯನ್ನು ಸಾದರ ಪಡಿಸಿದರು. ಮತ ಯಂತ್ರ, ಕಂಟ್ರೋಲಿಂಗ ಯುನಿಟ ಹಾಗೂ ವಿ.ವಿ.ಪ್ಯಾಟಗಳ ಕಾರ್ಯ ಹಾಗೂ ಮತ ಚಲಾಯಿಸುವ ಪ್ರಕ್ರಿಯೆಯನ್ನು ಸಾರ್ವಜನಿಕರ ಸಮ್ಮುಖದಲ್ಲಿ ಮತದಾರರೆಲ್ಲರಿಗೂ ಅರ್ಥವಾಗುವ ರೀತಿಯಲ್ಲಿ  ಹಂತ ಹಂತವಾಗಿ ವಿವರಿಸಿದರು.

ಪ್ರತಿ ಮತಗಟ್ಟೆಯಲ್ಲಿ ವಿದ್ಯುನ್ಮಾನ ಮತಯಂತ್ರ (ಇ.ವಿ.ಎಂ) ಹಾಗೂ ವಿ.ವಿ.ಪ್ಯಾಟ ಪೆಟ್ಟಿಗೆ ಇಡಲಾಗುತ್ತದೆ. ಮತದಾರ ಮತಗಟ್ಟೆಗೆ ಮತಚಲಾಯಿಸಲು ಬಂದಾಗ ಮತಯಂತ್ರದಲ್ಲಿ ಹಸಿರು ದೀಪ ಉರಿಯುತ್ತಿರುವದನ್ನು ಖಚಿತಪಡಿಸಿಕೊಂಡು ಬ್ಯಾಲೇಟ್ ಯುನಿಟನಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರು, ಚಿಹ್ನೆಯ ಎದುರು ಇರುವ ನೀಲಿ ಗುಂಡಿ ಒತ್ತುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ನಂತರ ಕೆಂಪು ದೀಪ ಹಾಗೂ ಬೀಪ್ ಸದ್ದು ಮತದಾನವಾಗಿರುವದನ್ನು ಖಚಿತಪಡಿಸುತ್ತದೆ. ಬಳಿಕ ಪಕ್ಕದಲ್ಲಿರುವ ವಿ.ವಿ.ಪ್ಯಾಟಯಂತ್ರದಲ್ಲಿ ತಾವು ಮತ ಚಲಾಯಿಸಿದ ಅಭ್ಯರ್ಥಿಯ ಕ್ರಮ ಸಂಖ್ಯೆ, ಹೆಸರು ಹಾಗೂ ಚಿಹ್ನೆಯನ್ನು ಒಳಗೊಂಡಿರುವ ಚೀಟಿಯನ್ನು ಏಳು ಸೆಕೆಂಡವರೆಗೆ ಮತದಾರ ನೋಡಿ ಮತದಾನವನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ಗದಗ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ರಾಜ್  ವಿವರಿಸಿದರು.

ಈ ಸಂದರ್ಭದಲ್ಲಿ ಅಸುಂಡಿ ಗ್ರಾಮದ ಯುವ ಮತದಾರರು, ವೃದ್ಧರು, ಮಹಿಳಾ ಮತದಾರರು ಸೇರಿದಂತೆ ಸಾರ್ವಜನಿಕರು  ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net