

ಹೂವಿನಹಡಗಲಿ: ಗಣೇಶ್ ಹಬ್ಬದ ಅಂಗವಾಗಿ ಅಹಿತಕರ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸುವುದರ ಜತೆಗೆ ತಾಲೂಕಿನಲ್ಲಿ 2190 ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಎಎಸ್ಪಿ ದೇವರಾಜ ಹೇಳಿದರು.
ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಅಳವಡಿಸಿದ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಶನಿವಾರ ಮಾತನಾಡಿದರು. ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಸಿನಿಮಾ ನಟರ ಚಿತ್ರ ಇರುವ ಧ್ವಜಗಳನ್ನು ಹಿಡಿದು ತಿರುಗಿಸುವುದು ಹಾಗೂ ಇತರ ಧ್ವಜಗಳನ್ನು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಪಾಲಕರನ್ನು ಅನಾಥರನ್ನಾಗಿ ಮಾಡದೆ ಜವಾಬ್ದಾರಿಯಿಂದ ವರ್ತಿಸಬೇಕು. ಪಟ್ಟಣದ ಎಲ್ಲ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಮೆರವಣಿಗೆ ಸಂದರ್ಭದಲ್ಲಿ ಹೆಚ್ಚು ಶಬ್ದ ಮಾಡುವ ಧ್ವನಿವರ್ಧಕಗಳನ್ನು ನಿಷೇಧಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ದೀಪಕ್ ಬೂಸರೆಡ್ಡಿ, ಪಿಎಸ್‌ಐಗಳಾದ ಮಣಿಕಂಠ, ಭರತ್ ಪ್ರಕಾಶ್, ಅಬ್ಬಾಸ್ ಸಿಬ್ಬಂದಿ ಇದ್ದರು.