

ಚಿತ್ರದುರ್ಗ: ಮಂಡ್ಯ ನಾಗಮಂಗಲದ ಬದರಿಕೊಪ್ಪಲಿನಲ್ಲಿ ಗಣಪತಿ ವಿಸರ್ಜನೆ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವುದನ್ನು ಖಂಡಿಸಿ ಚಿತ್ರದುರ್ಗ ನಾಗರಿಕರ ಸಮಿತಿ ಮತ್ತು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಒಕ್ಕೂಟ, ಪ್ರಸನ್ನ ಗಣಪತಿ ಸೇವಾ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಆನೆಬಾಗಿಲಿಂದ ಡಿಸಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಜಿಲ್ಲಾದ್ಯಂತ ಪ್ರತಿಷ್ಠಾಪಿಸಿರುವ ಗಣೇಶ ಪೆಂಡಾಲ್‌ಗಳ, ವಿಸರ್ಜನಾ ಮಹೋತ್ಸವದ ವೇಳೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ ಸೂಚಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ದುಷ್ಕರ್ಮಿಗಳು ಕಲ್ಲು ತೂರಾಟ, ಪೆಟ್ರೋಲ್ ಬಾಂಬ್, ಮಾರಕಾಸ್ತ್ರ ಬಳಸಿ ದಾಳಿಗೆ ಯತ್ನಿಸಿದ್ದಾರೆ. ಶಾಂತಿ-ಸುವ್ಯವಸ್ಥೆಗೆ ಭಂಗ ತರಲು ಮುಂದಾದವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಲು ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ನಾಗಮಂಗಲದ ಮೈಸೂರು ರಸ್ತೆ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಜಿಹಾದಿಗಳು ಗಣೇಶ ಮೂರ್ತಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೂರ್ವಯೋಜಿತ ಕೃತ್ಯವಾಗಿದ್ದು, ಸಮಾಜದಲ್ಲಿ ಆತಂಕ ಸೃಷ್ಟಿಸಲು ಕಾರಣರಾಗಿದ್ದಾರೆ. ಇದರ ಹಿಂದೆ ಇಸ್ಲಾಮಿಕ್ ಮೂಲಭೂತ ಸಂಘಟನೆಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೋರಿದರು.
ಹಿಂದು ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ನಯನ್, ಮುಖಂಡರಾದ ಬದರಿನಾಥ್, ಜಿ.ಎಂ.ಸುರೇಶ್, ನವೀನ್ ಚಾಲುಕ್ಯ, ಪ್ರಭಂಜನ್, ಕೇಶವ, ಭಾನುಮೂರ್ತಿ, ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಗೋಪಾಲ್‌ರಾವ್ ಜಾಧವ್, ಪದಾಧಿಕಾರಿಗಳಾದ ನಾಗರಾಜ್ ಬೇದ್ರೇ, ಮಂಜುನಾಥ್ ಇತರರಿದ್ದರು.