

ಬೆಳಗಾವಿ: ಗಣೇಶ ವಿಸರ್ಜನೆ ಮೆರವಣಿಗೆ ವೀಕ್ಷಣೆಗೆ ಬರುವ ಜನರ ಸುರಕ್ಷತೆ ದೃಷ್ಟಿಯಿಂದ ಮಾರ್ಗದುದ್ದಕ್ಕೂ ಭದ್ರತೆ ಜತೆಗೆ ಹೈಮಾಸ್ಕ್ ಬಲ್ಬ್ ಬೆಳಕಿನ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಗಣೇಶ ವಿಸರ್ಜನೆ ಮೆರವಣಿಗೆ ನಿಗದಿತ ಸಮಯದಲ್ಲಿ ಮುಗಿಸಲು ಮತ್ತು ಡಿಜೆ ಸೌಂಡ್ ಸಿಸ್ಟಮ್ ಬಳಕೆ ಮಾಡದಂತೆ ಎಲ್ಲ ಗಣೇಶೋತ್ಸವ ಮಂಡಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಈಗಾಗಲೇ ವಿಸರ್ಜನೆ ಮಾರ್ಗದುದ್ದಕ್ಕೂ ಗುರುತಿಸಿರುವ 4 ಸಾವಿರ ಸಾರ್ವಜನಿಕ ಸಿಸಿಟಿವಿಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ಸೂಕ್ಷ್ಮ, ಅತೀ ಸೂಕ್ಷ್ಮ ಪ್ರದೇಶ, ಹೆಚ್ಚಿನ ಜನಸಂದಣಿ ಸೇರುವ ಸ್ಥಳಗಳಲ್ಲಿ ತೀವ್ರ ನಿಗಾ ವಹಿಸಲು ಹೆಚ್ಚುವರಿಯಾಗಿ 600 ಸಿಸಿಟಿವಿ ಕ್ಯಾಮರಾ ಅಳವಡಿಸಲು ಟೆಂಡರ್ ಕರೆಯಲಾಗಿದೆ.
ಎಲ್ಲ ಗಣೇಶ ಮಂಟಪಗಳಿಗೆ ಆಯಾ ಮಂಡಳಿಗಳೇ ಸಿಸಿಟಿವಿ ಅಳವಡಿಸುವಂತೆ ವಿನಂತಿಸಲಾಗಿದೆ. ಕೆಲವರು ಸಮ್ಮತಿಸಿದರೆ, ಇನ್ನೂ ಕೆಲವರು ನಿರಾಕರಿಸಿದ್ದಾರೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಭದ್ರತೆಗಾಗಿ ವಿವಿಧ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿ ಕರೆಯಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಡಿಜೆ ನಿಷೇಧದ ಬಗ್ಗೆ ಚರ್ಚೆ: ಶಬ್ದ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ವಿಸರ್ಜನೆ ಮೆರವಣಿಗೆ ದಿನ ರಾತ್ರಿ 10 ಗಂಟೆಯಿಂದಲೇ ಸೌಂಡ್ ಸಿಸ್ಟಮ್ ಬಳಕೆ ಸಂಪೂರ್ಣ ನಿಷೇಧಿಸುವ ಕುರಿತು ಚರ್ಚಿಸಲಾಗಿದೆ. ಇನ್ನೊಂದು ಬಾರಿ ಗಣೇಶ ಮಂಡಳ ಜತೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ. ವಿಸರ್ಜನೆ ದಿನ ಮಂಟಪದಿಂದ ಮೂರ್ತಿ ತೆಗೆದುಕೊಂಡು ಹೋಗುವ ಸೂಕ್ಷ್ಮ ಪ್ರದೇಶದ ಗಲ್ಲಿಗಳಲ್ಲಿ ಮಂಡಳಗಳ ಮುಖಂಡರೊಂದಿಗೆ ಮತ್ತೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಪಾರ್ಕಿಂಗ್‌ಗೆ ಪರ್ಯಾಯ ವ್ಯವಸ್ಥೆ: ಗಣೇಶ ವಿಸರ್ಜನೆ ವೀಕ್ಷಣೆಗೆ ಬರುವ ವಾಹನಗಳ ಪಾರ್ಕಿಂಗ್‌ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಸರ್ದಾರ ಮೈದಾನ, ಹಳೇ ಪಿಬಿ ರಸ್ತೆ ದಂಡು ಮಂಡಳಿ ಪ್ರದೇಶ ಸೇರಿ ಮೆರವಣಿಗೆ ಮಾರ್ಗದ ಸಮೀಪದಲ್ಲಿಯೇ ಸೌಲಭ್ಯ ಕಲ್ಪಿಸಬೇಕು. ಅಂದು ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಬೇಕು. ರಾತ್ರಿ ಸಮಯದಲ್ಲಿ ವ್ಯಾಪಾರ ವಹಿವಾಟಿಗೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಗಣೇಶೋತ್ಸವ ಮಹಾಮಂಡಳಗಳ ಮುಖಂಡರು ಒತ್ತಾಯಿಸಿದರು.