

ಧಾರವಾಡ: ಜಿಲ್ಲಾದ್ಯಂತ ಗೌರಿ- ಗಣೇಶ ಹಬ್ಬವನ್ನು ಶಾಂತಿ ಸೌಹಾರ್ದದಿಂದ ಆಚರಿಸಲು ಸಾರ್ವಜನಿಕರು ಮುನ್ನಚ್ಚರಿಕೆ ಕ್ರಮ ಅನುಸರಿಸಿ ಜಿಲ್ಲಾ ಪೊಲೀಸ್ ಹಾಗೂ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಲೋಕೇಶ ಜಗಲಾಸರ್ ಮನವಿ ಮಾಡಿದ್ದಾರೆ.
ವಿಶೇಷವಾಗಿ ಯುವಕರು ಗಲಾಟೆ, ಗುಂಪುಘರ್ಷಣೆ ಇನ್ನಿತರ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಜಿಲ್ಲೆಯ ಅತಿ ಸೂಕ್ಷ್ಮ ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಶಾಂತಿ ಪಾಲನೆಗಾಗಿ ಕ್ಷಿಪ್ರ ಕಾರ್ಯಪಡೆ ತುಕಡಿಗಳಿಂದ ರೂಟ್ ಮಾರ್ಚ್‌ಗಳನ್ನು ನಡೆಸಲಾಗಿದೆ. ಎಲ್ಲ ತಾಲೂಕು ಕೇಂದ್ರಗಳಲ್ಲಿ ವಿಶೇಷ ದಂಡಾಧಿಕಾರಿಗಳು, ವಿದ್ಯುತ್ ವಿಭಾಗೀಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಗಣೇಶ ಮೂರ್ತಿಗಳ ವಿಸರ್ಜನಾ ಸ್ಥಳಗಳ ಸುತ್ತ ಬ್ಯಾರಿಕೆಡಿಂಗ್ ವ್ಯವಸ್ಥೆ, ಸಿಸಿಟಿವಿಗಳ ಅಳವಡಿಕೆ, ಬೆಳಕಿನ ವ್ಯವಸ್ಥೆ ಏರ್ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಅಗ್ನಿ ಅವಘಡ ತಡೆಗಟ್ಟಲು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲು ಸೂಚಿಸಲಾಗಿದೆ.
ಗಣೇಶ ಹಬ್ಬದ ಕಾಲಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡಲು 3 ಡಿಎಸ್‌ಪಿ, 13 ಪಿಐ, 15 ಪಿಎಸ್‌ಐ, 306 ಎಎಸ್‌ಐ, ಎಚ್‌ಸಿ, ಪಿಸಿಗಳು ಮತ್ತು 150 ಗಹರಕ್ಷಕರು, 10 ಡಿಎಆರ್ ಮತ್ತು 2 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗುತ್ತದೆ. ಜಿಲ್ಲೆಯ ವಿವಿಧ ಠಾಣೆಗಳಿಗೆ 11 ಡ್ರೋನ್ ಕ್ಯಾಮರಾಗಳನ್ನು ಪೂರೈಸಲಾಗುವುದು. ಅಲ್ಲದೆ, ವಿಸರ್ಜನಾ ಮೆರೆವಣಿಗೆಗಳನ್ನು ವಿಡಿಯೋಗ್ರಫಿ ಮಾಡಲಾಗುವುದು. ವಿವಿಧ ಠಾಣೆಗಳಿಗೆ 56 ಹ್ಯಾಂಡಿ ಕ್ಯಾಮ್, 101 ಟಾರ್ಚ್ ಲೈಟ್, 200 ಸಿಸಿಟಿವಿಗಳನ್ನು ಪೂರೈಸಲಾಗಿದೆ.
ಜಿಲ್ಲಾ ಸರಹದ್ದುಗಳಲ್ಲಿ 13 ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಸಂಶಯಾಸ್ಪದ ವಾಹನಗಳ ತಪಾಸಣೆ ಮಾಡಲಾಗುವುದು. ಕುಡಿದು ವಾಹನ ಚಲಾಯಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಗಣೇಶ ಮಂಡಳಿಯವರು ಸ್ವಯಂಸೇವಕರನ್ನು ನೇಮಿಸಿಕೊಂಡು ಅಹಿತಕರ ಘಟನೆ ನಡೆಯದಂತೆ ಶಾಂತಿ ಕಾಪಾಡಬೇಕು ಎಂದು ಪೊಲೀಸ್ ವರಿಷ್ಠಾಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.