

ಚಿತ್ರದುರ್ಗ: ಪರಿಸರಕ್ಕೆ ಹಾನಿ ಉಂಟು ಮಾಡುವ ಪಿಒಪಿ, ಲೋಹ ಮಿಶ್ರಿತ ವರ್ಣದಿಂದ ತಯಾರಿಸಿದ ಮೂರ್ತಿಗಳನ್ನು ಗಣೇಶೋತ್ಸವ ಆಚರಣೆ ವೇಳೆ ಮಾರಾಟ, ಬಳಕೆ ಮಾಡುವಂತಿಲ್ಲ ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಎಚ್ಚರಿಸಿದರು.
ಪರಿಸರಕ್ಕೆ ಪೂರಕವಾದ ಗಣೇಶೋತ್ಸವ ಆಚರಣೆ ಸಂಬಂಧ ನಗರಸಭೆ ಅಧಿಕಾರಿಗಳ ಜೊತೆ ವಿವಿಧೆಡೆ ಬುಧವಾರ ಭೇಟಿ ನೀಡಿ ಮಣ್ಣಿನ ಗಣೇಶ ಮೂರ್ತಿಗಳನ್ನೇ ತಯಾರಿಸಿ, ಯಾವುದೇ ಕಾರಣಕ್ಕೂ ಪಿಒಪಿ ಬಳಸಬೇಡಿ ಎಂದು ತಯಾರಕರಲ್ಲಿ ಜಾಗೃತಿ ಮೂಡಿಸಲು ಮುಂದಾದರು.
ನಗರಕ್ಕೆ ಬೇರೆಡೆಗಳಿಂದ ಪಿಒಪಿ ಗಣೇಶ ಮೂರ್ತಿಗಳು ಲಗ್ಗೆ ಇಡುತ್ತವೆ ಎಂಬ ಮಾಹಿತಿ ಇದೆ. ಅಂತಹ ಮೂರ್ತಿಗಳ ಮಾರಾಟ ಸರ್ಕಾರ ಸಂಪೂರ್ಣ ನಿಷೇಧಿಸಿದ್ದು, ತಕ್ಷಣ ಗಮನಕ್ಕೆ ತಂದರೆ ಕೂಡಲೇ ವಶಕ್ಕೆ ಪಡೆಯಲಾಗುವುದು ಎಂದರು.
ಪ್ರತಿ ವರ್ಷ ನಿರ್ದಿಷ್ಟ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ವಿಸರ್ಜಿಸಲು ನಿಗದಿತ ಜಲಮೂಲಗಳಲ್ಲಿ ನಗರಸಭೆಯಿಂದ ಅವಕಾಶ ಕಲ್ಪಿಸಲಾಗುವುದು. ಅಲ್ಲಿ ಬಿಟ್ಟು ಬೇರೆಲ್ಲೂ ವಿಸರ್ಜಿಸುವಂತಿಲ್ಲ. ಈ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲಿದ್ದೇವೆ. ಯಾವ ಕಾರಣಕ್ಕೂ ಪರಿಸರಕ್ಕೆ ಹಾನಿಯುಂಟು ಮಾಡಬೇಡಿ ಎಂದು ಮನವಿ ಮಾಡಿದರು.
ಪರಿಸರ ಇಂಜಿನಿಯರ್ ಜಾಫರ್, ಆರ್‌ಇ ಸಿ.ಮೋಕ್ಷದಾಯಿನಿ, ಯೋಗೇಂದ್ರ, ಎಚ್‌ಇ ಭಾರತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಪ್ರಕಾಶ್, ಉಪ ಪರಿಸರ ಅಧಿಕಾರಿ ರಾಜೇಶ್, ವನ್ಯಜೀವಿ ಮತ್ತು ಪರಿಸರ ಸಂರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್ ಇತರರಿದ್ದರು.