ಗಣೇಶ ಹಬ್ಬ ಶಾಂತಿ-ಸೌಹಾರ್ದ ಆಚರಣೆಗೆ ಡಿಸಿ ಮನವಿ

CTD DC MEETING-GANESHA----
Published on

ಚಿತ್ರದುರ್ಗ: ಗೌರಿ ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಲು ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.

ಡಿಸಿ ಕಚೇರಿಯಲ್ಲಿ ಶುಕ್ರವಾರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಹಾಗೂ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಕುರಿತು ಅಧಿಕಾ ರಿಗಳು ಹಾಗೂ ಸಂಘಟಕರ ಸಭೆಯಲ್ಲಿ ಮಾತನಾಡಿ, ಹಬ್ಬ ಹಾಗೂ ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಶೋಭಾಯಾತ್ರೆಯನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ನಡೆಸಲು ಪೊಲೀಸರ ಜತೆ ಕೈ ಜೋಡಿಸಬೇಕು ಎಂದರು.

ಈ ಬಾರಿ ಶೋಭಾಯಾತ್ರೆಯಲ್ಲಿ 4 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ. ಪೊಲೀಸರು ಬಂದೋಬಸ್ತ್ ಕೈಗೊಳ್ಳಲಿದ್ದಾರೆ. ನಗರದ ಬಿ.ಡಿ.ರಸ್ತೆ ಹಾಗೂ ಹೊಳಲ್ಕೆರೆ ರಸ್ತೆಯಲ್ಲಿ ಸುಗಮ ಮೆರವಣಿಗೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಮೆರವಣಿಗೆ ಸಾಗುವ ರಸ್ತೆ ಹಾಗೂ ಅಸು ಪಾಸಿನ ಸ್ಥಳಗಳಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲೆ ಸಾರ್ವಜನಿಕರು ಹತ್ತಿ ನಿಲ್ಲದಂತೆ ನಿರ್ಬಂಧ ವಿಧಿಸಬೇಕು ಎಂದರು.

ಪಿಒಪಿ ಗಣೇಶ ಮೂರ್ತಿಗಳ ಮಾರಾಟ ನಿಷೇಧಿಸಲಾಗಿದೆ. ಪರಿಸರ ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.

ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮೆರವಣಿಗೆಯಲ್ಲಿ ಡಿ.ಜೆ. ಬಳಸಲು ಅನುಮತಿ ಇಲ್ಲ. ಕಳೆದ ಶೋಭಾಯಾತ್ರೆಯಲ್ಲಿ 3 ಲಕ್ಷಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. 10ಕ್ಕೂ ಹೆಚ್ಚು ಜನರಿಗೆ ಡಿಜೆ ಶಬ್ಧದಿಂದ ಕಿವಿಗೆ ತೊಂದರೆಯಾಗಿದೆ. ಪೊಲೀಸ್ ಸಬ್ ಇನ್ಸ್‌ಪಕ್ಟರ್ ಒಬ್ಬರು ಕಿವಿ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದಾರೆ ಎಂದರು.

ಅಲ್ಲದೆ ಡಿಜೆ ಶಬ್ದದಿಂದ ವಾಕಿ ಟಾಕಿಗಳ ಸಂವಹನಕ್ಕೆ ಅಡ್ಡಿಯಾಗಿತ್ತು. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ತೊಂದರೆಯಾಗುತ್ತದೆ. ಮೆರವಣಿಗೆಯಲ್ಲಿ ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಉಂಟುಮಾಡುವ ಧ್ವನಿ ವರ್ಧಕ ಸೇರಿ ಶಬ್ದಮಾಲಿನ್ಯ ಮಾಡುವ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಬಳಸುವಂತಿಲ್ಲ.

ಪಟಾಕಿಗಳನ್ನು ಸಿಡಿಸುವಂತಿಲ್ಲ. ಯಾರಾದರೂ ಪಟಾಕಿ ಸಿಡಿಸಿದರೆ ಸ್ಥಳದಲ್ಲೇ ಬಂಧಿಸಲಾಗುವುದು. ಪ್ರಚೋಧನಕಾರಿ ಘೋಷಣೆಗಳನ್ನು ಕೂಗಬಾರದು. ಶೋಭಾಯಾತ್ರೆ ಮೆರವಣಿಗೆಗೆ 3000 ಪೊಲೀಸರನ್ನು ನಿಯೋಜಿಸಲಾಗುವುದು. ಆ.24 ರಂದು ಶಾಂತಿಸಭೆ ನಡೆಸಲಾಗುವುದು ಎಂದು ಬಂಡಾರು ತಿಳಿಸಿದರು.

ಜಿಪಂ ಸಿಇಒ ಡಾ.ಎಸ್.ಆಕಾಶ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಎಸ್‌ಪಿ ಉಮೇಶ್ ಈಶ್ವರ್‌ನಾಯ್ಕ, ಜಿಲ್ಲಾ ಪರಿಸರ ಅಧಿಕಾರಿ ಆಸಿಫ್‌ಖಾನ್, ನಗರಸಭೆ ಆಯುಕ್ತೆ ಎಂ.ರೇಣುಕಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net