ಗಣೇಶ ಪ್ರತಿಷ್ಠಾಪಿಸುವವರು ನಿಯಮಗಳನ್ನು ಪಾಲಿಸಬೇಕು

ಗೌರಿ-ಗಣೇಶ ಆಚರಣಾ ಪೂರ್ವ ನಿಯೋಜಿತ ಸಭೆಯಲ್ಲಿ ಕುಶಾಲನಗರ ಸರ್ಕಲ್ ಇನ್‌ಸ್ಪೆಕ್ಟರ್ ರಾಜೇಶ್ ಕೋಟ್ಯಾನ್ ಮಾತನಾಡಿದರು. ಶ್ರೀಧರ್, ಸ್ವಾಮೀ, ಶ್ರೀನಿವಾಸ್, ಸೋಮನಾಥ್, ಕೊಡಗರಹಳ್ಳಿ ಸುನಿಲ್ ಇದ್ದರು.
10sunti01..
Published on

ಸುಂಟಿಕೊಪ್ಪ: ಶ್ರೀ ಗೌರಿ-ಗಣೇಶ ಹಬ್ಬವನ್ನು ಆಚರಣೆ ಸಂದರ್ಭ ಆಯೋಜಕರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಯಾವುದೇ ಅನಾಹುತಗಳು ಸಂಭವಿಸದಂತೆ ಕಾನೂನು ಪರಿಪಾಲನೆ ಮಾಡಬೇಕು ಎಂದು ಕುಶಾಲನಗರ ಸರ್ಕಲ್ ಇನ್‌ಸ್ಪೆಕ್ಟರ್ ರಾಜೇಶ್ ಕೋಟ್ಯಾನ್ ತಿಳಿಸಿದರು.

ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಶ್ರೀ ಗೌರಿ-ಗಣೇಶ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿ, ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಆಯೋಜಕ ಸಮಿತಿ ಪದಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಪೊಲೀಸ್ ಠಾಣೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಮುಂಜಾಗ್ರತಾ ಕ್ರಮವಾಗಿ ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವುದರಿಂದ ಅಹಿತಕರ ಘಟನೆಗಳ ಬಗ್ಗೆ ಮಾಹಿತಿ ಕಲೆ ಹಾಕಲು ಸಾಧ್ಯವಾಗುತ್ತದೆ ಎಂದರು.

ಗಣಪತಿ ಮೂರ್ತಿ ವಿಸರ್ಜನೆಯ ವೇಳೆ ನುರಿತ ಈಜುಗಾರರು ಸ್ಥಳದಲ್ಲಿರಬೇಕು. ಅವರಿಗೆ ಲೈಫ್ ಜಾಕೆಟ್‌ಅನ್ನು ಕಡ್ಡಾಯವಾಗಿ ತೊಟ್ಟಿರಬೇಕು. ಮೂರ್ತಿಗಳ ವಿಸರ್ಜಿಸುವ ಮುನ್ನ ಮೆರವಣಿಗೆ ಹೊರಡುವ ರೂಟ್ ಮ್ಯಾಪ್ ಬಗ್ಗೆ ಠಾಣೆಗೆ ಮೊದಲೇ ತಿಳಿಸಿರಬೇಕು ಎಂದು ಸೂಚಿಸಿದರು. ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್, ಅಪರಾಧ ವಿಭಾಗದ ಎಸ್‌ಐ ಸ್ವಾಮಿ, ಎಎಸ್‌ಐ ಶ್ರೀನಿವಾಸ್, ಪಂಚಾಯಿತಿ ಸದಸ್ಯರಾದ ಸೋಮನಾಥ್, ಕೊಡಗರಹಳ್ಳಿ ಸುನಿಲ್, ಪೊಲೀಸ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net