

ಹನೂರು: ಗಣೇಶಮೂರ್ತಿ ಪ್ರತಿಷ್ಠಾಪಿಸುವ ಆಯೋಜಕರು ಏಕಗವಾಕ್ಷಿ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಂಡು ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು. ಈ ಸಂಬಂಧ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ತಹಸೀಲ್ದಾರ್ ಕೆ.ಎನ್. ಚೈತ್ರಾ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಅತಿಥಿಗೃಹದ ಸಭಾಂಗಣದಲ್ಲಿ ಗುರುವಾರ ಗೌರಿ-ಗಣೇಶ ಹಬ್ಬ ಆಚರಣೆ ಸಂಬಂಧ ಆಯೋಜಿಸಿದ್ದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸರ್ಕಾರದ ಮಾರ್ಗಸೂಚಿ ಅನ್ವಯ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗೌರಿ-ಗಣೇಶ ಹಬ್ಬದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸುವ ಸಂಬಂಧ ಗಣೇಶೋತ್ಸವ ಆಯೋಜಕರಿಗೆ ಅನುಮತಿ ನೀಡುವ ಸಲುವಾಗಿ ಏಕಗವಾಕ್ಷಿ ಸಮಿತಿಯನ್ನು ಜಾರಿಗೆ ತಂದಿದೆ. ಆದ್ದರಿಂದ ಸರ್ಕಾರದ ಆದೇಶವನ್ನು ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹಾಗಾಗಿ ಆಯೋಜಕರು ಪೊಲೀಸ್, ಕಂದಾಯ, ಸೆಸ್ಕ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆದುಕೊಂಡು ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು. ಜತೆಗೆ ಹೈಟೆನ್ಷನ್‌ವಿದ್ಯುತ್ ತಂತಿ ಹಾದು ಹೋಗಿರುವ ಮಾರ್ಗದಲ್ಲಿ ಮೂರ್ತಿ ಸ್ಥಾಪನೆ ಹಾಗೂ ಮೆರವಣಿಗೆಗೆ ಅವಕಾಶವಿಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು. ಈ ದೆಸೆಯಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಪಿಡಬ್ಲ್ಯುಡಿ ಎಇಇಗಳಾದ ಚಿನ್ನಣ್ಣ, ಪುರುಷೋತ್ತಮ್, ಎಎಸೈಗಳಾದ ಹನೂರಿನ ಶಿವರಾಜು, ರಾಮಾಪುರದ ಗುರುಸ್ವಾಮಿ, ಮಹದೇಶ್ವರಬೆಟ್ಟದ ಮಾದಪ್ಪ, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಪಪಂ ಆರೋಗ್ಯಾಧಿಕಾರಿ ಪ್ರಕಾಶ್, ಸೆಸ್ಕ್ ಇಲಾಖೆಯ ಜೆಇ ಆನಂದ್, ತಾಪಂ ವ್ಯವಸ್ಥಾಪಕ ರಮೇಶ್ ಹಾಗೂ ಇನ್ನಿತರರಿದ್ದರು.