ಗಣಿಬಾಧಿತ ಪ್ರದೇಶದಲ್ಲಿ ದೂರದೃಷ್ಟಿಯ ಯೋಜನೆ

28-SanduruP1
Published on

ಸಂಡೂರು: ಖಾಸಗಿ ಸಂಸ್ಥೆ ಸಹಯೋಗದಲ್ಲಿ ಸಮೀಕ್ಷೆ ನಡೆಸಿ ಜನರ ಬೇಡಿಕೆ ಅರಿತು ಯೋಜನೆಗಳನ್ನು ರೂಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ತಿಳಿಸಿದರು.

ಪಟ್ಟಣದ ಕೃಷಿ ಇಲಾಖೆ ಸಭಾಂಗಣದಲ್ಲಿ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಆಧುನಿಕ ಪಶುಪಾಲನಾ ಪದ್ಧತಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಗ್ರಾಮೀಣ ಭಾಗದ ಮಹಿಳೆಯರು ದೇಶದ ಸಾಂಸ್ಕೃತಿಕ ರಾಯಭಾರಿಗಳಾಗಿದ್ದು, ಕೃಷಿಗೆ ಸಂಬಂಧಿಸಿದ ಹಬ್ಬ, ಹರಿದಿನಗಳನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ ಎಂದರು.

ಮಹಿಳೆಯರು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಅರಿಯುವ ಪ್ರಯತ್ನ ಸಾಗಿದೆ. ತಾಲೂಕಿನಲ್ಲಿ ಗಣಿ ಚಟುವಟಿಕೆಗಳು ನಿಂತರೆ ಗಣಿ ಅವಲಂಬಿತ ಕುಟುಂಬಗಳಿಗೆ ಸಂಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಸಂಸದ ಈ.ತುಕಾರಾಮ್ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ದೂರದೃಷ್ಟಿಯ ಯೋಜನೆ ರೂಪಿಸುವ ಚಿಂತನೆ ನಡೆದಿದೆ ಎಂದು ತಿಳಿಸಿದರು.

ಸಮಸ್ಯೆಗಳು ಎದುರಾದಾಗ ಮಹಿಳೆಯರು ಎದೆಗುಂದದೆ ಸಂಸಾರ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಬೇಕು. ರೈತರ ಕೊನೆಯ ದಿನಗಳು ನೆಮ್ಮದಿಯಿಂದ ಕೂಡಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಕಾಲವ್ಯರ್ಥ ಮಾಡುವ ಬದಲಿಗೆ ಯುವ ಜನತೆ ಪಾಲಕರ ಸಂಕಷ್ಟಗಳನ್ನು ಅರಿತು ಕುಟುಂಬಗಳಿಗೆ ಹೆಗಲಾಗುವ ಕೆಲಸ ಮಾಡಬೇಕಿದೆ ಎಂದು ಶಾಸಕಿ ಅನ್ನಪೂರ್ಣ ಅಭಿಪ್ರಾಯಪಟ್ಟರು.

ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ವಿನೋದ್ ಕುಮಾರ್ ಇಲಾಖೆಯ ಯೋಜನೆಗಳು, ಡಾ.ಅರವಿಂದ ಜಾನುವಾರು ರೋಗಗಳು ಮತ್ತು ಚಿಕಿತ್ಸಾ ಕ್ರಮ, ತಾಲೂಕು ಪಶು ವೈದ್ಯಾಧಿಕಾರಿ ಡಾ.ವಲಿಬಾಷಾ ಜಂತುಬಾಧೆ, ಉಣ್ಣೆ ನಿವಾರಣೆ ಕುರಿತು ತರಬೇತಿ ನೀಡಿದರು.

ತಾಪಂ ಇಒ ಎಚ್.ಷಡಕ್ಷರಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥರೆಡ್ಡಿ, ತೋಟಗಾರಿಕೆ ಇಲಾಖೆಯ ಹನುಮೇಶ ನಾಯಕ, ಪುರಸಭೆ ಸದಸ್ಯರಾದ ವಣಿಕೇರಿ ಸುರೇಶ, ಎಲ್.ಎಚ್.ಶಿವಕುಮಾರ್, ಈರೇಶ್ ಶಿಂಧೆ, ಅಶೋಕ. ಸಿ.ಬ್ರಹ್ಮಯ್ಯ, ಹನುಮೇಶ, ಅಗಸರ ಪಂಪಣ್ಣ, ಸಂತೋಷ, ರೈತ ಸೇವಾ ಸಹಕಾರ ಸಂಘದ ಸದಸ್ಯ ತುಮಟಿ ಅಂಜಿನಪ್ಪ, ಧರ್ಮಾಪುರ ವೆಂಕಟೇಶ, ಡಾ.ತನ್ಮಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net