ಗಣಿಬಾಧಿತ ಪ್ರದೇಶದಲ್ಲಿ ಅಗತ್ಯ ಸೌಲಭ್ಯ

2-SanduruP1
Published on

ಸಂಡೂರು: ತಾಲೂಕಿನ ಗಣಿಬಾಧಿತ ಗ್ರಾಮಗಳಿಗೆ ಕುಡಿಯುವ ನೀರು, ಆಸ್ಪತ್ರೆ, ರಸ್ತೆ, ಅಂಗನವಾಡಿ ಕೇಂದ್ರ ಸೇರಿದಂತೆ ಇತರ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಂಇಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿಜ್ಜೂರು ಹೆಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಂಗಳವಾರ ಮಾತನಾಡಿದರು. ಸಂಡೂರು ತಾಲೂಕಿನಲ್ಲಿ ಗಣಿಗಾರಿಕೆಯಿಂದ ಹೆಚ್ಚಿನ ಸಮಸ್ಯೆಗಳಾಗಿವೆ. ಕೆಎಂಇಆರ್‌ಸಿಯಿಂದ ಅನುದಾನ ಕೊಡಿ ಎಂದು ಸಾರ್ವಜನಿಕರು ಗಮನ ಸೆಳೆದಿದ್ದಾರೆ ಎಂದು ತಿಳಿಸಿದರು.

ಸಮಾಜ ಪರಿವರ್ತನಾ ಸಮುದಾಯ, ಜನ ಸಂಗ್ರಾಮ ಪರಿಷತ್, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರಾದ ಟಿ.ಎಂ.ಶಿವಕುಮಾರ್, ಶ್ರೀಶೈಲ ಆಲ್ದಳ್ಳಿ, ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಮಾಧವರೆಡ್ಡಿ ಮತ್ತಿತರರು, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಗಣಿಬಾಧಿತ ಪ್ರದೇಶದ ಅಭಿವೃದ್ಧಿಗೆ 8648.95 ಕೋಟಿ ರೂ. ವೆಚ್ಚದಲ್ಲಿ 408 ಕಾಮಗಾರಿಗಳಿಗೆ ಕೆಎಂಇಆರ್‌ಸಿ ಅನುಮೋದನೆ ನೀಡಿದೆ. ಈ ಪೈಕಿ ಶೇ.28.57 ಮಾತ್ರ ಗಣಿಬಾಧಿತ ಪ್ರದೇಶದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಶೇ.71.42 ಹಣ ಗಣಿಬಾಧಿತವಲ್ಲದ ಪ್ರದೇಶದ ಅಭಿವೃದ್ಧಿಗೆ ಬಳಸಲಾಗುತ್ತಿದೆ. ನಗರ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಗ್ರಾಮಾಂತರ ಪ್ರದೇಶದ ಅಭಿವೃದ್ಧಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಯೋಜನೆ ರೂಪಿಸುವಾಗ ಸ್ಥಳ ಪರಿಶೀಲನೆಯೊಂದಿಗೆ ಜನರ ಆರ್ಥಿಕ, ಸಾಮಾಜಿಕ ಅಧ್ಯಯನ ನಡೆಸಬೇಕು. ಸಂಡೂರು ತಾಲೂಕಿನ ಕೃಷಿ, ಪರಿಸರ, ಜನಜೀವನ ಅಭಿವೃದ್ದಿಗೆ ಹೆಚ್ಚಿನ ಹಣ ಮೀಸಲಿಡಬೇಕು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಹರಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು. ಉದ್ಯೋಗ ಸೃಷ್ಟಿ, ಜನಜೀವನ ಮಟ್ಟ ಸುಧಾರಣೆ, ಪರಿಸರ ಸಂರಕ್ಷಣೆಗೆ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು.

ಮೇಲುಸ್ತುವಾರಿ ಪ್ರಾಧಿಕಾರದ ಸಲಹೆಗಾರ ಬಾಲಸುಬ್ರಮಣಿಯನ್ ಮಾತನಾಡಿ, ಜನರು ಬೇಡಿಕೆಗಳನ್ನು ಬರಹ ರೂಪದಲ್ಲಿ ನೀಡಿದರೆ ಚರ್ಚಿಸಿ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ. ಗಣಿ ಪ್ರದೇಶದಿಂದ ಐದು ಕಿ.ಮೀ.ವ್ಯಾಪ್ತಿಯಲ್ಲಿರುವ ಎಲ್ಲ ವಸತಿ ರಹಿತರಿಗೆ ಮನೆಗಳನ್ನು ನಿರ್ಮಿಸಲಾಗುವುದು. ಕೃಷಿಗೆ ಸಂಬಂಧಿಸಿದಂತೆ ಯಾವ ಜಮೀನಿನಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದನ್ನು ತಿಳಿಯಲು ತಾಂತ್ರಿಕ ಸಮಿತಿ ರಚಿಸಲಾಗಿದೆ. ಬಾಧಿತ ಪ್ರದೇಶದ ಜನ ಮತ್ತು ಪರಿಸರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ತಹಸೀಲ್ದಾರ್ ಅನಿಲ್ ಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ಕೃಷ್ಣಾನಾಯ್ಕ, ಸಂಘಟನೆಗಳ ಪ್ರಮುಖರಾದ ಸೋಮಪ್ಪ, ಜಿ.ಕೆ.ನಾಗರಾಜ, ಮೂಲೆಮನೆ ಈರಣ್ಣ, ಜಿ.ಕೆ.ನಾಗರಾಜ, ಚಂದ್ರಶೇಖರ್, ಸುಬಾನ್, ಖಾದರ್ ಬಾಷ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net