ಗಣಿಬಾಧಿತ ಪ್ರದೇಶದ ವಿದ್ಯಾರ್ಥಿಗಳಿಗೆ ಸಂಜೆ ಉಪಾಹಾರ

greengram
Published on

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ರಾಜ್ಯದ ಗಣಿಬಾಧಿತ ತಾಲೂಕುಗಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜತೆಗೆ ಪೂರಕ ಪೌಷ್ಟಿಕ ಆಹಾರವಾಗಿ ಸಂಜೆ ಲಘು ಉಪಾಹಾರ ಕೊಡಲು ಶಿಕ್ಷಣ ಇಲಾಖೆ ಮುಂದಾಗಿದೆ.

ಚಿತ್ರದುರ್ಗ ಸೇರಿ ರಾಜ್ಯದ ನಾಲ್ಕು ಜಿಲ್ಲೆಗಳ 10 ಗಣಿಬಾಧಿತ ತಾಲೂಕುಗಳ ವ್ಯಾಪ್ತಿಯಲ್ಲಿ ಇರುವಂಥ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಂಜೆ ಪೂರಕ ಪೌಷ್ಟಿಕ ಆಹಾರ ವಿತರಿಸುವ ಶಿಕ್ಷಣ ಇಲಾಖೆಯ ಈ ಯೋಜನೆಗೆ ಕರ್ನಾಟಕ ಗಣಿಗಾರಿಕೆ ಪರಿಸರ ಪುನಃಸ್ಥಾಪನೆ ನಿಗಮ (ಕೆಎಂಇಆರ್‌ಸಿ) ಹಸಿರು ನಿಶಾನೆ ತೋರಿಸಿದೆ.

ಇದಕ್ಕಾಗಿ ಕೆಎಂಇಆರ್‌ಸಿಯ ಸಿಇಎಂಪಿಐಜೆಡ್ ಪ್ರಾಜೆಕ್ಟ್ ಅಡಿ ಅನುದಾನ ಮಂಜೂರಾಗಿದೆ. ಯೋಜನೆ ಸಮರ್ಪಕ ಅನುಷ್ಠಾನ ಮತ್ತು ಪ್ರತಿ ತಿಂಗಳ ಪ್ರಗತಿ ಪರಿಶೀಲನೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಸಮಿತಿ ರಚಿಸಲಾಗಿದೆ.

ಚಿತ್ರದುರ್ಗ, ವಿಜಯನಗರ, ಬಳ್ಳಾರಿ ಹಾಗೂ ತುಮಕೂರು ಜಿಲ್ಲೆಗಳ 10 ಗಣಿಬಾಧಿತ ತಾಲೂಕುಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಲ್ಲಿ ಇರಬಹುದಾದ ಅಪೌಷ್ಟಿಕತೆ, ರಕ್ತಹೀನತೆ ಮತ್ತು ಬಹು ಪೋಷಕಾಂಶಗಳ ನ್ಯೂನತೆ ನಿಯಂತ್ರಿಸಿ, ವಿದ್ಯಾರ್ಥಿಗಳ ಆರೋಗ್ಯ ಮತ್ತು ಬೆಳವಣಿಗೆ ಸುಧಾರಣೆಗೆ ತರುವ ಉದ್ದೇಶದಿಂದ ಅವರ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ 3 ವರ್ಷಗಳ ಅವಧಿಗೆ ಎಸ್‌ಎನ್‌ಎಫ್(ಸಪ್ಲಿಮೆಂಟರಿ ನ್ಯೂಟ್ರಿಷಿಯನ್ ಫುಡ್) ಯೋಜನೆ ಅನುಷ್ಠಾನವಾಗುತ್ತಿದೆ.

ಬಿಸಿಯೂಟ, ಮೊಟ್ಟೆ ಅಥವಾ ಬಾಳೆಹಣ್ಣು ಜತೆಗೆ ಪ್ರತ್ಯೇಕವಾಗಿ ವಾರದ 4 ದಿನ ಸಂಜೆ 4.30 ಕ್ಕೆ ನಾನಾ ಕಾಳುಗಳ ಉಸುಳಿ ಹಾಗೂ ಒಂದು ದಿನ ಆಯಾ ಸೀಜನ್‌ನಲ್ಲಿ ದೊರೆಯುವ ಹಣ್ಣುಗಳ ವಿತರಣೆಗೆ ಇಲಾಖೆ ಯೋಜನೆ ರೂಪಿಸಿದೆ. ನಾಲ್ಕು ಜಿಲ್ಲೆಗಳ 10 ತಾಲೂಕು ಗಳ 2680 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 2,22,610 ವಿದ್ಯಾರ್ಥಿಗಳನ್ನು ಫಲಾನುಭವಿಗಳೆಂದು ಗುರುತಿಸಲಾಗಿದೆ.

ಯಾವ ಜಿಲ್ಲೆ, ತಾಲೂಕು?

ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕಿನ 367 ಶಾಲೆಗಳು ಹಾಗೂ ಒಂದರಿಂದ 10ನೇ ತರಗತಿವರೆಗಿನ 67,739 ವಿದ್ಯಾರ್ಥಿಗಳು, ಅದೇ ರೀತಿ ಸಂಡೂರು-169-26209. ವಿಜಯನಗರದ ಹೊಸಪೇಟೆ 154-28318. ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲೂಕಿನ-334-22752, ಹೊಸದುರ್ಗ-306-12417, ಹೊಳಲ್ಕೆರೆ-227-10801, ಮೊಳಕಾಲ್ಮೂರು-146-17333.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ-312-12551, ಗುಬ್ಬಿ-394-15316 ಹಾಗೂ ತಿಪಟೂರು ತಾಲೂಕಿನ 271ಶಾಲೆಗಳ 9174 ವಿದ್ಯಾರ್ಥಿಗಳಿಗೆ ಸಂಜೆ ಉಪಾಹಾರ ವಿತರಿಸಲಾಗುತ್ತದೆ.

ಸೋಮವಾರದಿಂದ ಶುಕ್ರವಾರದವರೆಗೆ ಕಡಲೆಕಾಳು, ಹೆಸರು ಕಾಳು, ಶೇಂಗಾ ಉಸುಳಿ ಹಾಗೂ ಹಣ್ಣು ವಿತರಿಸಲಾಗುತ್ತದೆ. ಇದಕ್ಕಾಗಿ ಸಂಜೆ ತಿಂಡಿ, ಅಡುಗೆ ಸಿಬ್ಬಂದಿ ಹಾಗೂ ಅವರಿಗೆ ಕೊಡುವಂಥ ತರಬೇತಿ ವೆಚ್ಚ ಸಹಿತ ಒಟ್ಟು ಮೂರು ವರ್ಷಕ್ಕೆ 116.23 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

....ಕೋಟ್....

ಗಣಿಬಾಧಿತ ಪ್ರದೇಶಗಳ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಂಜೆ ಸಮಯದಲ್ಲಿ ಪೂರಕ ಪೌಷ್ಟಿಕ ಆಹಾರ ವಿತರಿಸುವ ಯೋಜನೆಗೆ ಕೆಎಂಇಆರ್‌ಸಿ ಒಪ್ಪಿಗೆ ಸೂಚಿಸಿದೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯ, ಅವರ ಕಲಿಕಾ ಗುಣಮಟ್ಟ ಹಾಗೂ ಹಾಜರಾತಿ ಕೂಡ ಪೂರ್ಣ ಪ್ರಮಾಣದಲ್ಲಿ ಸುಧಾರಿಸಲಿದೆ.

ಡಾ.ಎಸ್. ಆಕಾಶ್

ಸಿಇಒ, ಜಿಪಂ, ಚಿತ್ರದುರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net