ಗಣಿಬಾಧಿತ ಪ್ರದೇಶದ ಅಭಿವೃದ್ಧಿಗೆ ಆದ್ಯತೆ

27 0
Published on

ತಿಪಟೂರು: ಸಮಗ್ರ ಪರಿಸರ ಯೋಜನೆಯಡಿ ಗಣಿಬಾಧಿತ ಜಲಾನಯನ ಪ್ರದೇಶದಲ್ಲಿ ಜಲಾನಯನ ತತ್ವದ ಆಧಾರದಲ್ಲಿ ದಿಬ್ಬದಿಂದ ಕಣಿವೆ ಮಾದರಿಯಲ್ಲಿ ಜಲಾನಯನ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಂಡು ಸಮಗ್ರ ಉಪಚಾರ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.

ತಿಪಟೂರು ಕೃಷಿ ಇಲಾಖೆಯಿಂದ ಬಿಳಿಗೆರೆಯಲ್ಲಿ ಗಣಿಬಾಧಿತ ಪ್ರದೇಶಗಳಲ್ಲಿ ಸಮಗ್ರ ಪರಿಸರ ಯೋಜನೆಯಡಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿ, ಗಣಿಬಾಧಿತ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವುದು, ಮಣ್ಣಿನ ಸವೆತ ಕಡಿಮೆಗೊಳಿಸುವುದು, ಜಾನುವಾರುಗಳಿಗೆ ಕುಡಿಯುವ ನೀರು, ಕೃಷಿ ಬಳಕೆಗೆ ನೀರು ಕೊಯ್ಲು ರಚನೆಗಳ ಮೂಲಕ ನೀರನ್ನು ಸಂರಕ್ಷಿಸುವುದು, ಕೃಷಿ- ತೋಟಗಾರಿಕೆ, ಕೃಷಿ -ಅರಣ್ಯ ಚಟುವಟಿಕೆಗಳನ್ನು ಅಳವಡಿಕೊಳ್ಳುವುದು, ಆಸ್ತಿ

ರಹಿತ ಜನರಿಗೆ ಕೌಶಲ ಆಧಾರಿತ ತರಬೇತಿ ಮತ್ತು ಸ್ವ-ಸಹಾಯ ಗುಂಪುಗಳಿಗೆ ಆದಾಯ ಉತ್ಪಾದಿಸುವ ಚಟುವಟಿಕೆಗಳ ತರಬೇತಿ ಮೂಲಕ ಸುಸ್ಥಿರ ಜೀವನೋಪಾಯ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ಪಿ.ಪವನ್​ ಮಾತನಾಡಿ, ತಾಲೂಕಿನಲ್ಲಿ ಕಿಬ್ಬನಹಳ್ಳಿ-ಕೋಡಿಹಳ್ಳಿ ಹಳ್ಳ, ಹಾಲ್ಕುರಿಕೆ- ಆಚಾರ್ಯಪಾಳ್ಯ ಮತ್ತು ಮೂಗ್ತಿಹಳ್ಳಿ ಉಪ ಜಲಾನಯನಗಳು ಗಣಿಬಾಧಿತ ಪ್ರದೇಶಗಳಲ್ಲಿವೆ. ಯೋಜನೆಯು 3 ಉಪಜಲಾನಯನ ಪ್ರದೇಶದ 38 ಕಿರುಜಲಾನಯನ ಪ್ರದೇಶಗಳ 14 ಗ್ರಾಪಂನ 112 ಹಳ್ಳಿಗಳ 21,242 ಹೆಕ್ಟೇರ್​ ಪ್ರದೇಶದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಯೋಜನೆ ಅನುಷ್ಠಾನಗೊಳಿಸಲು ಮೂಲ ಮಾಹಿತಿ ಸಮೀಕ್ಷೆ ನಡೆಸಲಾಗುತ್ತಿದ್ದು, ಕುಟುಂಬ ಸಮೀಕ್ಷೆದಾರರು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವರು. ನಂತರ ನಿವ್ವಳ ಯೋಜನೆ ಮತ್ತು ವಿಸ್ತತ ಯೋಜನೆ ತಯಾರಿಸಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಯೋಗೀಶ್​ ಮಾತನಾಡಿ, ಮೂಲ ಮಾಹಿತಿ ಸಮೀಕ್ಷೆಯಲ್ಲಿ ರೈತರು ಸರಿಯಾದ ಮಾಹಿತಿ ನೀಡಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದರು. ಬಗರ್​ ಹುಕುಂ ಸಮಿತಿ ಸದಸ್ಯ ಶಿವಸ್ವಾಮಿ ಹಿಂಡಿಸ್ಕೆರೆ, ಬಿಳಿಗೆರೆ ಗ್ರಾಪಂ ಅಧ್ಯೆ ಕಲ್ಪನಾ, ಗ್ರಾಪಂ ಸದಸ್ಯರಾದ ಪ್ರತಿಭಾ, ಜ್ಯೋತಿ, ದೇವರಾಜ್​, ರವಿ, ಮಂಜುನಾಥಸ್ವಾಮಿ, ಚನ್ನಕೇಶವ, ಕೃಷಿ ಅಧಿಕಾರಿ ವಿನುತಾ, ವಿಭಾ ಮತ್ತು ಪಿಡಿಒ ದಶರಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net