ಗಣಿಬಾಧಿತ ಪ್ರದೇಶಕ್ಕೆ ಅನುದಾನ ಬಳಕೆಯಾಗಲಿ

26 YERRISWAMY 02
Published on

ಬಳ್ಳಾರಿ : ಕೆಂಎಂಇಆರ್‌ಸಿ ಅನುದಾನ ಗಣಿಬಾಧಿತ ಪ್ರದೇಶಕ್ಕೆ ಮಾತ್ರ ಬಳಕೆಯಾಗಬೇಕು, ಜಿಲ್ಲೆಯ ವಿವಿಧ ಅಭಿವೃದ್ಧಿಗಳಿಗೆ ಬಳಕೆ ಮಾಡಬಾರದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್. ಹಿರೇಮಠ ಒತ್ತಾಯಿಸಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಜನ ಸಂಗ್ರಾಮ ಪರಿಷತ್ ವತಿಯಿಂದ ಗುರುವಾರ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು. ಮಾಜಿ ಸಚಿವ ಶ್ರೀರಾಮುಲು ಸಂಡೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ಕೆಎಂಆರ್‌ಸಿಯ ಎರಡು ಸಾವಿರ ಕೋಟಿ ರೂ. ಬಳಕೆ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೆ, ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯ್ಕ ಇತ್ತೀಚೆಗೆ ಚೆಕ್ ಡ್ಯಾಂ ಮತ್ತು ಕೆರೆಗಳ ಅಭಿವೃದ್ಧಿಯ ಕಾಮಗಾರಿ ಭೂಮಿಪೂಜೆ ನೆರವೇರಿಸಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ. ಹೊಸಪೇಟೆಯ ನಗರಕ್ಕೆ ಕುಡಿಯುವ ನೀರು ಸರಬರಾಜಿಗಾಗಿ 308 ಕೋಟಿ ರೂ. ಅನುದಾನಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ವಿಜಯನಗರ ಡಿಸಿ ಹೇಳಿಕೆ ನೀಡಿದ್ದಾರೆ. ಗಣಿಬಾಧಿತ ಜನರಿಗೆ ಮತ್ತು ಪ್ರದೇಶಕ್ಕೆ ಮೊಟ್ಟ ಮೊದಲ ಅದ್ಯತೆಯಾಗಿ ಜಾರಿಯಾಗಬೇಕಾದ ಯೋಜನೆಗಳು ವಿವಿಧ ಪ್ರದೇಶಗಳಲ್ಲಿ ಜಾರಿಗೊಳಿಸುವುದನ್ನು ಸಂಘಟನೆ ವಿರೋಧಿಸಿದೆ. ಈ ಅಲ್ಲ ಅಂಶಗಳನ್ನು ಪರಿಗಣಿಸಿ ಕೆಎಂಆರ್‌ಸಿಯ ಅಧ್ಯಕ್ಷರು ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಅಕ್ರಮ ಗಣಿಗಾರಿಕೆಯಿಂದ ಬಾಧಿತವಾಗಿರುವ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು, ಆರೋಗ್ಯ , ಶಿಕ್ಷಣ ಸೇರಿದಂತೆ ಜನರ ಬದುಕನ್ನು ಕಟ್ಟಿಕೊಡಲು ಬಳಕೆಯಾಗಬೇಕಿತ್ತು. ಆದರೆ, ಇಲ್ಲಿಯವರೆಗೆ ಹಲವು ಗ್ರಾಮಗಳಲ್ಲಿ ಒಂದು ಯೋಜನೆ ಜಾರಿಯಾಗಿಲ್ಲ ಎಂದು ಅಕ್ರೋಶ ಹೊರಹಾಕಿದರು. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆ ನೀಡಿದರೆ ಮುಂದಿನ ದಿನಗಳಲ್ಲಿ ಯಾರು ಸಿಎಂ ಆಗುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದ್ದರಿಂದ, ಸದ್ಯ ಸಿಎಂ ಸಿದ್ದರಾಮಯ್ಯ ಒಳ್ಳೆಯ ಸಲಹೆಗಾರರನ್ನು ಇಟ್ಟಿಕೊಳ್ಳುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಸಂಘಟನೆ ಸದಸ್ಯರಾದ ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಶ್ರೀಶೈಲ ಆಲದಳ್ಳಿ, ಜಿ. ಕೆ. ನಾಗರಾಜ, ಟಿ. ಕೆ. ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net