ಗಣಿಪ್ರದೇಶಗಳ ಗಡಿ ಪರಿಶೀಲನೆ

Published on

ಬಳ್ಳಾರಿ : ಕರ್ನಾಟಕ ಹಾಗೂ ಆಂಧ್ರಪ್ರದೇಶದ ಅಂತರರಾಜ್ಯ ಗಡಿಭಾಗದಲ್ಲಿನ ಬಿ1 ಕೆಟಗರಿಯ ಏಳು ಗಣಿಪ್ರದೇಶಗಳಿಗೆ ಗುರುವಾರ ಸಿಇಸಿ ತಂಡ ಭೇಟಿ ನೀಡಿ ಪರಿಶೀಲಿಸಿತು. ಜತೆಗೆ ಗಣಿ ಮಾಲೀಕರ ಅಹವಾಲು ಸ್ವೀಕರಿಸಿತು.
ಗಣಿಕಂಪನಿಗಳ ಗಡಿ ಪರಿಶೀಲನೆಗೆ ಆಗಮಿಸಿದ ಸಿಇಸಿ ಅಧಿಕಾರಿಗಳ ತಂಡ, ಗಡಿಗುರುತು ನಿರ್ಧಾರ ಸಂಬಂಧ ಎರಡು ರಾಜ್ಯಗಳ ಅಧಿಕಾರಿಗಳು, ಗಣಿ ಮಾಲೀಕರ ಅಹವಾಲುಗಳನ್ನು ಆಲಿಸಿದೆ. ಬಿ1 ಕೆಟಗರಿಯ ಏಳು ಗಣಿಪ್ರದೇಶಗಳಿಗೂ ಭೇಟಿ ನೀಡಿದ್ದ ಸಿಇಸಿ ಅಧಿಕಾರಿಗಳ ತಂಡ, ಗಡಿಗಳನ್ನು ಪರಿಶೀಲಿಸಿದೆ. ಜತೆಗೆ ಅಂತರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ತುಮಟಿ-ವಿಠಲಾಪುರ ಗ್ರಾಮಗಳ ನಡುವಿನ ಗಡಿ ಸಮೀಕ್ಷೆಯನ್ನು ಸಹ ಪರಿಶೀಲಿಸಿದ್ದಾರೆ. ಜು. 5 ಶುಕ್ರವಾರದಂದು ಸಂಡೂರು ತಾಲೂಕಿನ ನರಸಾಪುರದಲ್ಲಿನ ಎನ್‌ಎಂಡಿಸಿ ಅತಿಥಿ ಗೃಹದಲ್ಲಿ ಸಿಇಸಿ ತಂಡ ಗಣಿಮಾಲೀಕರ ಸಭೆ ನಡೆಸಲಿದೆ.
ಪರಿಶೀಲನೆ ಏಕೆ : ಅಕ್ರಮ ಗಣಿಗಾರಿಕೆಯಿಂದಾಗಿ ಅಂತರಾಜ್ಯಗಳ ಗಡಿ ಗುರುತುಗಳು ನಾಶವಾಗಿದ್ದು, ಜೊತೆಗೆ ಗಡಿಭಾಗದಲ್ಲಿನ ಗಣಿಪ್ರದೇಶಗಳ ಸಹ ಒತ್ತುವರಿಯಾಗಿತ್ತು. ಕರ್ನಾಟಕ ಆಂಧ್ರದ ಗಡಿ ಸಮಸ್ಯೆ ಇರುವ ಕಾರಣ ಅಂತರಾಜ್ಯ ಗಡಿಭಾಗದಲ್ಲಿನ ಬಿ1 ಕೆಟಗರಿಯ ಏಳು ಗಣಿಕಂಪನಿಗಳ ಗಡಿ ನಿರ್ಧಾರವಾಗಿರಲಿಲ್ಲ. ಈ ಗಣಿಕಂಪನಿಗಳ ಗಡಿ ನಿರ್ಧರಿಸುವಂತೆ ಸುಪ್ರೀಂಕೋರ್ಟ ಆದೇಶಿಸಿತ್ತು. ಅದರಂತೆ ಸಿಇಸಿ ನಿರ್ದೇಶನದಂತೆ ಕಳೆದ ಮೇ 29 ರಿಂದ ಜೂನ್ 6 ವರೆಗೆ ಸೂರತ್ಕಲ್‌ನ ಎನ್‌ಐಟಿಕೆ ತಾಂತ್ರಿಕ ತಂಡ, ಅಂತರಾಜ್ಯಗಳ ಅಧಿಕಾರಿಗಳು ಸೇರಿ ಗಡಿ ಗುರುತಿಸಿ, ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net