

ಮೈಸೂರು: ಗಣಿತವಿಲ್ಲದೆ ಬದುಕಿಲ್ಲ. ಜಗತ್ತೂ ಇಲ್ಲ ಎಂದು ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಜಯಂತಿ ಅಂಗವಾಗಿ ಹಿರಣ್ಮಯಿ ಪ್ರತಿಷ್ಠಾನ, ಕಾವೇರಿ ಬಳಗದ ಸಹಯೋಗದಲ್ಲಿ ಹಾರ್ಡ್ವಿಕ್ ಪ್ರೌಢಶಾಲೆ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ, ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಂದಕ್ಕೂ ಗಣಿತದ ಲೆಕ್ಕಾಚಾರ ಬೇಕೇ ಬೇಕು. ಗಣಿತವಿಲ್ಲದೆ ಬದುಕಿಲ್ಲ. ಜಗತ್ತೂ ಇಲ್ಲ. ಗಣಿತವನ್ನು ಕಲಿತವರಿಗೆ ಉಳಿದ ವಿಷಯಗಳೆಲ್ಲ ನೀರು ಕುಡಿದಂತೆ ಸಲೀಸು. ಆದ್ದರಿಂದ ವಿದ್ಯಾರ್ಥಿಗಳು ಶ್ರೀನಿವಾಸ ರಾಮಾನುಜನ್ ಅವರಂತಹ ಗಣಿತತಜ್ಞ ಮಹನೀಯರ ಬದುಕನ್ನು ಮಾದರಿಯಾಗಿಟ್ಟುಕೊಂಡು ಗಣಿತದ ಬಗ್ಗೆ ಆಸಕ್ತಿ, ಒಲವು ಬೆಳೆಸಿಕೊಳ್ಳಬೇಕು ಎಂದರು.
ಗಣಿತ ಬಹಳ ಕಷ್ಟ. ಅದು ಕಬ್ಬಿಣದ ಕಡಲೆ ಎಂಬ ಭಾವನೆ ಬಹಳಷ್ಟು ಜನರಲ್ಲಿದೆ. ಆದರೆ, ಕನಸು ಮನಸ್ಸಿನಲ್ಲೆಲ್ಲ ಅಂಕಿ ಸಂಖ್ಯೆಗಳನ್ನೇ ತುಂಬಿಕೊಂಡು ಗಣಿತವನ್ನೇ ಉಸಿರಾಗಿಸಿಕೊಂಡು ಗಣಿತ ಲೋಕದಲ್ಲಿ ಸಾಧನೆ ಮಾಡಿದ ಶ್ರೀನಿವಾಸ ರಾಮಾನುಜನ್ ಬಗ್ಗೆ ಅರಿತವರಾರೂ ಗಣಿತವನ್ನು ಕಬ್ಬಿಣದ ಕಡಲೆ ಎನ್ನಲಾರರು.
ಬದಲಿಗೆ ಗಣಿತ ಎಂಬುದು ಕಲ್ಲುಸಕ್ಕರೆ ಎನ್ನುತ್ತಾರೆ. 32 ವರ್ಷಗಳು ಮಾತ್ರ ಬದುಕಿದ್ದ ಅವರು, ಗಣಿತದಲ್ಲಿ ನೂರು ಜನ್ಮಕ್ಕಾಗುವಷ್ಟು ಸಾಧನೆ ಮಾಡಿ ತೋರಿಸಿದ್ದಾರೆ. ಗಣಿತ ಲೋಕದಲ್ಲಿ ಯಾರೂ ಮುರಿಯದಂತಹ ದಾಖಲೆ ಬರೆದು ಭಾರತದ ಕೀರ್ತಿ ಪತಾಕೆ ವಿಶ್ವದ ಉದ್ದಗಲಕ್ಕೂ ಹಾರಿಸಿದ್ದಾರೆ ಎಂದರು.
ಸಂಖ್ಯಾಶಾಸ್ತ್ರಜ್ಞ ಎಸ್.ಜಿ.ಸೀತಾರಾಮ್, ವಿಶ್ರಾಂತ ಗಣಿತ ಶಿಕ್ಷಕ ಹಾಗೂ ಕವಿ ಎಂ.ಮುತ್ತು ಸ್ವಾಮಿ, ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಮಾತನಾಡಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ತನ್ಮಯ್, ಷಿಫಾ ಬಾನು, ಮಹಮದ್ ಜಲಾಲ್, ಏಂಜೇಲ್, ಜೀವನ್ ಹಾಗೂ ಕೆ.ಎಂ.ನಕ್ಷತ್ರ ಅವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು
ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ, ವಿಶ್ರಾಂತ ಮುಖ್ಯ ಶಿಕ್ಷಕ ಗುರುಭಕ್ತಯ್ಯ, ಶಿಕ್ಷಕರಾದ ಕೃಷ್ಣನಾಯಕ್, ಜೆ. ಸಬೀನಾ, ಕೆ.ಎಸ್.ಅಕ್ಕಮಹಾದೇವಿ, ಪುಷ್ಪಲತಾ, ಸಿ.ಷಣ್ಮುಖ, ಎಚ್.ಡಿ.ಕೃಷ್ಣ ನಾಯಕ, ಷಣ್ಮುಖ, ಚಿತ್ರಕಲಾ ಶಿಕ್ಷಕ ಮನೋಹರ್ ಇನ್ನಿತರರು ಉಪಸ್ಥಿತರಿದ್ದರು.