

ವಿಜಯವಾಣಿ ಸುದ್ದಿಜಾಲ ಧಾರವಾಡ
ಗಣಿತವು ವಿಜ್ಞಾನದ ಮಹಾರಾಣಿಯಾದಂತೆ ಅಂಕ ಗಣಿತವು ಗಣಿತದ ಮಹಾರಾಣಿಯಾಗಿದೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಗಣಿತ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಸಿ. ಶಿರಾಳಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಗಣಿತ ಪರಿವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕರ್ನಾಟಕ ರಾಜ್ಯ ಗಣಿತ ಪರಿಷತ್ ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪ್ರೌಢಶಾಲಾ ಶಿಕ್ಷಕರ ಗಣಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಮಾತನಾಡಿ, ಪರೀಕ್ಷೆ ಬಂದಾಗ ವಿದ್ಯಾರ್ಥಿಗಳಿಗೆ ಒತ್ತಡ ಹೇರದೆ ಈಗಿನಿಂದಲೇ ಸಿದ್ಧತೆಯಲ್ಲಿ ತೊಡಗಬೇಕು. ವಿದ್ಯಾರ್ಥಿಗಳಿಗೆ ಬೇಕಾದ ಜ್ಞಾನ ನೀಡಿದರೆ ಉತ್ತಮ. ಶಾಲೆಗಳಲ್ಲಿ ಗುಣಮಟ್ಟದ ಕಲಿಕೆಯಾಗಬೇಕು ಎಂದರು.
ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಮಾತನಾಡಿ, ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಜಿಲ್ಲೆ ಫಲಿತಾಂಶ ಉತ್ತಮ ಪಡಿಸಲು ಶಿಕ್ಷಕರು ಶ್ರಮಿಸಬೇಕು ಎಂದರು. ಶಹರ ಕ್ಷೇತ್ರ ಸಮನ್ವಯಧಿಕಾರಿ ಎಂ.ವಿ. ಅಡವೇರ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಬೋಳಿಶೆಟ್ಟಿ ಮಾತನಾಡಿ, ಹಿಂದಿನ ಕಾಲದಂತೆ ಕಪ್ಪು ಹಲಗೆ ಮತ್ತು ಬುಕ್‌ಗೆ ಸೀಮಿತವಾಗದೆ ಪ್ರಸ್ತುತ ದಿನಗಳಲ್ಲಿ ಡಿಜಿಟಲೀಕರಣ ಹಾಗೂ ಪ್ರಯೋಗಾಲಯ ಮಾದರಿಗಳ ಮೂಲಕ ಕಲಿಕೆಯಾಗಬೇಕಿದೆ ಎಂದರು.
ಗಣಿತ ಪರಿಷತ್ ಅಧ್ಯಕ್ಷ ಬಿ.ಎಸ್. ಪಾಟೀಲ, ಗಣಿತ ವಿಷಯ ಪರಿವೀಕ್ಷಕ ಯಲ್ಲಪ್ಪ ಹುಬ್ಬಳ್ಳಿ, ಡಾ.ಆರ್. ಕ್ರಿಸ್ಟೋಫರ್, ಆರ್.ಎಸ್. ದೇಶಪಾಂಡೆ, ವಿದ್ಯಾರ್ಥಿಗಳು, ಇತರರು ಇದ್ದರು. ಬಿ.ಎಸ್. ಪಾಟೀಲ ಸ್ವಾಗತಿಸಿದರು. ವಿಶಾಲಾಕ್ಷಿ ಎಸ್.ಜೆ. ನಿರೂಪಿಸಿದರು. ಬಿ.ಜಿ. ಬಶೆಟ್ಟಿ ವಂದಿಸಿದರು.