ಗಣಿಗಾರಿಕೆಯ ರಾಜಧನ ಅಭಿವೃದ್ಧಿಗೆ ಬಳಕೆ

23-pnp 2
ಪಾಂಡವಪುರ ತಾಲೂಕಿನ ಮಾಡರಹಳ್ಳಿ ಗ್ರಾಮದ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮವನ್ನು ಸಂಸದೆ ಸುಮಲತಾ ಅಂಬರೀಶ್ ಉದ್ಘಾಟಿಸಿದರು. ಕುಮಾರ್, ದೀಪು, ಶೋಭಾ ಕುಮಾರ್ ಇತರರು ಇದ್ದರು.
Published on

ಪಾಂಡವಪುರ: ಗಣಿಗಾರಿಕೆಯಿಂದ ಪಾವತಿಯಗುವ ರಾಜಧನ ಜಿಲ್ಲೆಯ ಅಭಿವೃದ್ಧಿಗೆ ಬಳಕೆಯಾಗುತ್ತದೆ. ಆದರೆ ಕೆಲವರು ರಾಜಧನ ವಂಚಿಸಿ ಗಣಿಗಾರಿಕೆ ನಡೆಸುತ್ತಿದ್ದರು. ಹೀಗಾಗಿ ಅವರ ವಿರುದ್ಧ ಹೋರಾಟ ಮಾಡಿರುವುದಾಗಿ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ತಾಲೂಕಿನ ಮಾಡರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಹಂಚಿಕೆಯಾಗಿದ್ದ 11 ಲಕ್ಷ ರೂ. ಅನುದಾನದ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಕೆಲ ಪ್ರಭಾವಿಗಳು ಸರ್ಕಾರಕ್ಕೆ ನ್ಯಾಯಯುತವಾಗಿ ಪಾವತಿಸಬೇಕಾದ ರಾಜಧನವನ್ನು ವಂಚಿಸುತ್ತಿದ್ದಾರೆ. ಸಂಸದೆಯಾಗಿ ಇಂತಹವರ ವಿರುದ್ಧ ಹೋರಾಟ ಮಾಡಿದ ಪರಿಣಾಮ ರಾಜಧನದ ಹಣ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಜನ ಭಾವನಾತ್ಮಕವಾಗಿ ಯೋಚನೆ ಮಾಡುತ್ತಾರೆ. ಕೇವಲ ಭಾವುಕರಾದರೆ ಪ್ರಯೋಜನವಿಲ್ಲ. ಗ್ರಾಮಗಳು ಮತ್ತು ತಾಲೂಕು ಅಭಿವೃದ್ಧಿಗಾಗಿ ವಿವೇಚನೆಯಿಂದ ಮತ ನೀಡಬೇಕಿದೆ. ಕ್ಷೇತ್ರದ ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಭರವಸೆ ಕೊಟ್ಟು ಮಾಡಿಲ್ಲ ಎಂದು ನೀವೇ ಆರೋಪಿಸುತ್ತಿದ್ದೀರ. ಹೀಗಾಗಿ ಜಾಗೃತರಾಗಿ ಮತ ನೀಡಬೇಕು. ಸಂದರ್ಭ ಬಂದಾಗ ಯಾರಿಗೆ ಮತ ನೀಡಬೇಕು ಎಂದು ಸ್ಪಷ್ಟವಾಗಿ ತಿಳಿಸುತ್ತೇನೆ ಎಂದರು.

ಸಂಸದರ ಕೆಲಸ ಏನು ಎಂಬುದನ್ನು ಅಂಬರೀಶ್ ತಿಳಿಸಿಕೊಟ್ಟಿದ್ದರು. ಅಂಬರೀಶ್ ಅವರಿಗಿದ್ದಷ್ಟು ಶಕ್ತಿ ನನಗಿಲ್ಲ. ಅವರಿಗೆ ದೇವರು ಆ ರೀತಿಯ ಶಕ್ತಿ ಕೊಟ್ಟಿದ್ದರು. ರಾಜಕಾರಣಿಗಳು ಜನರ ಮುಗ್ಧತೆಯನ್ನು ದುರ್ಬಳಕೆ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಶಾಸಕರುಗಳಿಗಿಂತ ಎಲ್ಲ ಕಡೆ ಓಡಾಡಿಕೊಂಡು ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಸಂಸದರ ಅನುದಾನವನ್ನು ಆದ್ಯತೆ ಮೇಲೆ ಬಳಸಿಕೊಂಡು ಶಕ್ತಿಮೀರಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ತಹಸೀಲ್ದಾರ್ ಕುಮಾರ್, ಬಿಇಒ ಜಿ.ಎ.ಲೋಕೇಶ್, ಕಂದಾಯ ನಿರೀಕ್ಷಕರಾದ ಮಹದೇವಸ್ವಾಮಿ, ಶಿವಪ್ರಕಾಶ್, ಕಾಂಗ್ರೆಸ್ ಮುಖಂಡ ದೀಪು, ತಾಪಂ ಮಾಜಿ ಸದಸ್ಯೆ ಶೋಭಾ ಕುಮಾರ್, ಗ್ರಾಪಂ ಸದಸ್ಯ ಶಂಕರ್, ಎಸ್‌ಡಿಎಂಸಿ ಅಧ್ಯಕ್ಷ ಚೆಲುವರಾಜು, ಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net