

ಬಳ್ಳಾರಿ : ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆ ನೀಡಬಾರದು ಎಂದು ವಿರೋಧಿಸಿ ಜನಸಂಗ್ರಾಮ ಪರಿಷತ್, ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಸೇರಿ ಇಲ್ಲಿನ ಗಡಗಿ ಚೆನ್ನಪ್ಪ ವೃತ್ತದಿಂದ ಡಿಸಿ ಕಚೇರಿಯವರೆಗೆ ಅಹಿಂಸಾತ್ಮಕ ನೇರ ಕ್ರಿಯೆಯ ಜಾಗೃತಿ ರೇಖೆ ಚಳುವಳಿಯ ನಡೆಸಿ ಡಿಸಿ ಅವರಿಗೆ ಮನವಿ ಸಲ್ಲಿಸಿದರು.
ಸಮಾಜ ಪರಿವರ್ತನಾ ಸಮುದಾಯದ ಸದಸ್ಯ ಎಸ್.ಆರ್. ಹಿರೇಮಠ ಮಾತನಾಡಿ, ಗಣಿಗಾರಿಕೆಯಿಂದ ವನ್ಯಜೀವಿಗಳಿಗೆ ದಕ್ಕೆಯಾದರೆ ಅವುಗಳು ಗ್ರಾಮಗಳಿಗೆ ನುಗ್ಗಿ ಜನಜಾನುವಾರುಗಳ ಮೇಲೆ ದಾಳಿಯಾಗಲಿದೆ. ಇದರಿಂದ ಮಾನವ ಹಾಗೂ ಪ್ರಾಣಿ ಸಂಘರ್ಷ ಹೆಚ್ಚಲಿದೆ. ಕಲ್ಯಾಣ ಕರ್ನಾಟಕಕ್ಕೆ ಆಮ್ಲಜನಕದ ಬ್ಯಾಂಕ್ ಎಂದೇ ಕರೆಯುವ ಸಂಡೂರಿನ ಕಾಡು ಹಾಳಾದರೆ ಇಲ್ಲಿನ ಹವಾಮಾನ ಬದಲಾವಣೆಯಾಗಿ ಮಳೆ, ಬೆಳೆ ಇಲ್ಲದೆ ಅಪಾರ ಸಂಕಷ್ಟ ಎದುಗಾರಲಿದೆ. ಮಣ್ಣಿನ ಸವತೆ ಹೆಚ್ಚಾಗಿ ಹಳ್ಳ ಕೊಳ್ಳಗಳು, ಅಣೆಕಟ್ಟುಗಳಲ್ಲಿ ಅಪಾರ ಪ್ರಮಾಣದ ಹೂಳು ತುಂಬಿಕೊಂಡು ಜಲಕ್ಷಾಮವಾಗಲಿದೆ. ಕಾಡು ನಾಶವಾಗಲಿದೆ ಹಾಗೂ ಜನರ ಶ್ವಾಸಕೋಶಗಳು ಹಾಳಾಗಿ ಚಿಕಿತ್ಸೆಯೇ ಇಲ್ಲದ ರೋಗಗಳಿಗೆ ಜನರು ಬಲಿಯಾಗುತ್ತಾರೆ. ಇಡೀ ಪ್ರಪಂಚದಲ್ಲಿಯೇ ಎಲ್ಲಿಯೂ ಕಂಡುಬರದ ಕ್ರೋಟೆಲೇರಿಯಾ ಸಂಡೂರೆನ್ಸಿಸ್ ಮತ್ತು ಈ ಕಾಡಿನಲ್ಲಿರುವ 279 ಗಿಡಮೂಲಿಕೆಗಳ ಆಸ್ತಿತ್ವಕ್ಕೆ ಧಕೆಯಾಗಲಿದೆ. ಕೃಷಿ, ತೋಟಗಾರಿಕೆ ಹಾಗೂ ಹೈನುಗಾರಿಕೆ ಮೇಲೆ ದುಷ್ಟಪರಿಣಾಮ ಬೀರಿ ವಿವಿಧ ರೋಗಗಳು ಕಾಣಿಸಿಕೊಳ್ಳಲಿವೆ ಎಂದರು.
ಜನಸಂಗ್ರಾಮ್ ಪರಿಷತ್ ಸದಸ್ಯ ಶ್ರೀಶೈಲ ಆಲದಹಳ್ಳಿ ಮಾತನಾಡಿ, ರಾಜ್ಯ ಸರ್ಕಾರ ಸಂಡೂರಿನ ದೇವದಾರಿ ಹಾಗೂ ರಾಮನಮಲೈ ಅರಣ್ಯ ಪ್ರದೇಶವನ್ನು ಕುದುರೆಮುಖ ಹಾಗೂ ವಿಶ್ವೇಶ್ವರಯ್ಯ ಗಣಿ ಕಂಪನಿಗಳಿಗೆ ಗುತ್ತಿಗೆ ನೀಡಬಾರದೆಂದು ಆಗ್ರಹಿಸಿದರು.
ಬಳಿಕ ಜಿಲ್ಲಾಧಿಕಾರಿ ಮೂಲಕ ಸಿಎಂ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೆಎಂಇಆರ್‌ಸಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರು.