ಗಣಿಗಾರಿಕೆಗೆ ಅನುಮತಿ ನೀಡದಂತೆ ಮನವಿ

Published on

ಚಾಮರಾಜನಗರ : ತಾಲೂಕಿನ ಚನ್ನಪ್ಪನಪುರ ಗ್ರಾಮದ ಸಮೀಪದಲ್ಲಿ ಕೆಲವರು ಗಣಿಗಾರಿಕೆ ನಡೆಸಲು ಮುಂದಾಗಿದ್ದು, ಯಾವುದೇ ಕಾರಣಕ್ಕೂ ಗಣಿಗಾರಿಕೆ ಮತ್ತು ಕ್ರಷರ್ ನಡೆಸಲು ಅನುಮತಿ ನೀಡಬಾರದು ಎಂದು ಆರೋಪಿಸಿ ಗ್ರಾಮಸ್ಥರು ಬುಧವಾರ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಡಿ.ಎಸ್.ರಾಜೇಶ್ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮದ ಸರ್ವೇ ನಂ, 101 ಮತ್ತು 102 ರ ಸುಮಾರು 4.5 ಎಕರೆ ಜಮೀನಿನಲ್ಲಿ ಗಣಿಗಾರಿಕೆ ಮತ್ತು ಕ್ರಷರ್ ನಡೆಸಲು ಅನುಮತಿ ಕೋರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆದರೇ ಈ ಜಮೀನಿನ ಸಮೀಪದಲ್ಲೇ ಹಲವಾರು ರೈತರ ಜಮೀನು ಇದೆ. ಅದಲ್ಲದೇ ಇದರ ಸಮೀಪದಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ನಿರ್ಮಿಸಲು ಆದೇಶ ಮಾಡಲಾಗಿದೆ ಎಂದು ಹೇಳಿದರು.

ಪ್ರಸ್ತುತ ಗಣಿಗಾರಿಕೆ ಪ್ರಾರಂಭಿಸಲು ಮುಂದಾಗಿರುವ ಜಮೀನಿನ ಸಮೀಪದಲ್ಲೇ ಅರಣ್ಯ ಪ್ರದೇಶವಿದ್ದು, ವನ್ಯಜೀವಿಗಳ ವಾಸಸ್ಥಾನವಾಗಿದೆ. ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಬೋರ್‌ವೆಲ್ ಸಮೀಪದಲ್ಲೇ ಇದೆ. ಅದಲ್ಲದೇ ಸಮೀಪದಲ್ಲೇ ಪುರಾತನ ವೀರಭದ್ರೇಶ್ವರ ದೇವಾಲಯವಿದೆ. ಒಂದು ವೇಳೆ ಗಣಿಗಾರಿಕೆಗೆ ಅವಕಾಶ ನೀಡಿದರೇ ದೇವಾಲಯ, ಅರಣ್ಯ ಸಂಪತ್ತು, ವನ್ಯ ಜೀವಿಗಳಿಗೆ ಕುತ್ತುಂಟಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮದ ಸಮೀಪ ಯಾವುದೇ ಗಣಿಗಾರಿಕೆಗೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಲ್ಲೇಶ್, ಮಹೇಶ್, ಕಪ್ಪಣ್ಣ, ನಟರಾಜ್, ಲೋಕೇಶ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net