

ಹಾಸನ: ಪಶ್ಚಿಮಘಟ್ಟ ಹಾಗೂ ಆನೆಗಳು ವಾಸ ಮಾಡುವ ಪ್ರದೇಶಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ನಿಷೇಧಿಸುವಂತೆ ಪಶ್ಚಿಮಘಟ್ಟ ಜಂಟಿ ಹೋರಾಟ ಸಮಿತಿ ಅಧ್ಯಕ್ಷ ಪುಟ್ಟೇಗೌಡ ಆಗ್ರಹಿಸಿದರು.
ಮಲೆನಾಡು ಭಾಗ ಸಕಲೇಶಪುರ ಹಾಗೂ ಆಲೂರು ತಾಲೂಕುಗಳಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದು ಅಕ್ರಮವಾಗಿರಲಿ ಅಥವಾ ಸಕ್ರಮವಾಗಿರಲಿ, ಪರಿಸರ ಸಂರಕ್ಷಣಾ ದೃಷ್ಟಿಯಿಂದ ಹಾಗೂ ಮುಂದಿನ ಪೀಳಿಗೆಯ ಬದುಕಿಗಾಗಿ ಕಲ್ಲು ಗಣಿಗಾರಿಕೆ ನಿಷೇಧಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ದೆಹಲಿ ಮೂಲದವರು ಸಕಲೇಶಪುರ ತಾಲೂಕು ಹೊಸ್ಸೂರು ಬಳಿ, ಸುತ್ತಲೂ ಬೇಲಿ ಹಾಕಿಕೊಂಡು ಗಣಿಗಾರಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಸುಳ್ಳು ದೂರು ದಾಖಲಿಸಿ ಬೆದರಿಕೆ ಹಾಕುತ್ತಿದ್ದಾರೆ. ಗಣಿಗಾರಿಕೆಗೆ ನಿಲ್ಲಿಸಲು ಕೋರಿ, ಈಗಾಗಲೇ ಜಿಲ್ಲಾಧಿಕಾರಿ ಮತ್ತು ಡಿಎಫ್‌ಒ ಹಾಗೂ ಅರಣ್ಯ ಸಚಿವ ಈಶ್ವರ್‌ಖಂಡ್ರೆ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದರು. ಆದರೆ ಇಲ್ಲಿಯವರೆಗೂ ಸೂಕ್ತವಾಗಿ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ದೂರಿದರು. ಮುಂದಿನ ಒಂದು ತಿಂಗಳ ಒಳಗೆ ಗಣಿಗಾರಿಕೆ ನಿಷೇಧ ಮಾಡದಿದ್ದಲ್ಲಿ, ಸರ್ಕಾರದ ಗಮನ ಸೆಳೆಯಲು ಗಣಿಗಾರಿಕೆ ನಡೆಯುತ್ತಿರುವ ಆರು ಗ್ರಾಪಂ ವ್ಯಾಪ್ತಿಯ ಸುಮಾರು 1 ಸಾವಿರ ಜನರು ಒಡಗೂಡಿ ಪಾದಯಾತ್ರೆ ಹೋರಾಟದ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತೇವೆ ಎಂದರು.
ಆಗಲೂ ನ್ಯಾಯ ಸಿಗದೇ ಇದ್ದರೆ ಮುಂದೆ ಉಗ್ರ ಹೋರಾಟ ರೂಪಿಸುವ ತೀರ್ಮಾನ ಮಾಡಿದ್ದೇವೆ ಎಂದು ಎಚ್ಚರಿಸಿದರು. ಈಗಾಗಲೇ ಅಸ್ಸಾಂ ರಾಜ್ಯದಲ್ಲಿ ಆನೆಗಳಿರುವ ಭಾಗಗಳಲ್ಲಿ ಕಲ್ಲು ಗಣಿಗಾರಿಕೆ ನಿಷೇಧ ಮಾಡಲಾಗಿದೆ. ಅದೇ ಕ್ರಮ ಮಲೆನಾಡಿನಲ್ಲೂ ಆಗಬೇಕು ಎಂದರು. ಇದಕ್ಕಾಗಿಯೇ ಪಶ್ಚಿಮ ಘಟ್ಟ ಉಳಿಸಿ ಜಂಟಿ ಹೋರಾಟ ಸಮಿತಿ ರಚನೆ ಮಾಡಿಕೊಂಡಿದ್ದೇವೆ, ಸಮಿತಿಯಲ್ಲಿ ಹೊಸೂರು ಚಂಗಡಿಹಳ್ಳಿ, ಉಚ್ಚಂಗಿ, ವನಗೂರು ಮೊದಲಾದ ಪಂಚಾಯ್ತಿ ಒಳಗೊಂಡಿವೆ ಎಂದರು. ಗಣಿಗಾರಿಕೆಗೆ ಕಡಿವಾಣ ಹಾಕದೇ ಇದ್ದರೆ ಕೇರಳದ ವಯನಾಡು ಪರಿಸ್ಥಿತಿ ಬರಲೂ ಬಹುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪುಟ್ಟಸ್ವಾಮಿ, ರಮೇಶ್, ಶಶಿಧರ್,ಹೇಮಂತ್ ಕುಮಾರ್ ಇದ್ದರು.