

ಚಿತ್ರದುರ್ಗ: ನಗರದ ಸರ್ಕಾರಿ ವಿಜ್ಞಾನ ಕಾಲೇಜು ಸಮೀಪದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಭಾನುವಾರ 76ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು.
ಪರೇಡ್ ಕಮಾಂಡರ್ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಆರ್‌ಪಿಐ ಎಸ್.ಎಸ್.ಯುವರಾಜ್ ಅವರ ಮುಂದಾಳತ್ವದಲ್ಲಿ ಒಟ್ಟು 25 ತಂಡಗಳಿಂದ ಆಕರ್ಷಕ ಪಥಸಂಚಲನ ಜರುಗಿತು. ಆರ್‌ಎಸ್‌ಐ ವರಣ್, ಪಿಎಸ್‌ಐ ಸುರೇಶ್, ಗೃಹರಕ್ಷಕ ದಳದ ಪ್ರಹ್ಲಾದ್, ಅರಣ್ಯ ಇಲಾಖೆ ವಸಂತಕುಮಾರ್ ನೇತೃತ್ವದ ತುಕಡಿಗಳು, ಸರ್ಕಾರಿ ವಿಜ್ಞಾನ ಕಾಲೇಜು, ಸಂತ ಜೋಸೆಫೆರ ಕಾನ್ವೆಂಟ್, ವಿದ್ಯಾವಿಕಾಸ, ಪಾರ್ಶ್ವನಾಥ, ಎಸ್‌ಜೆಎಂ, ವಾಸವಿ, ಕ್ರೆಸೆಂಟ್ ಹಾಗೂ ತರಳುಬಾಳು ಪ್ರೌಢಶಾಲೆ, ಎನ್‌ಸಿಸಿ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಗೂಳಯ್ಯನಹಟ್ಟಿ ಮೊರಾರ್ಜಿ ದೇಸಾಯಿ ವಸತಿಶಾಲೆಯ ತಂಡ ಆಕರ್ಷಕ ಪಥ ಸಂಚಲನ ನಡೆಸಿ, ಗಮನ ಸೆಳೆಯಿತು. ಇದೇ ವೇಳೆ ಬ್ಯಾಂಡ್ ಮಾಸ್ಟರ್ ತಿಪ್ಪೇಶ್ ನಾಯ್ಕ್ ನೇತೃತ್ವದ ಪೊಲೀಸ್ ಬ್ಯಾಂಡ್, ಅಜಯ್, ಚಂದನಾ ನಾರಾಯಣ್, ಪಲ್ಲಕ್ ಸಮೀರ್, ಯಶ್ವಂತ್ ಇನ್ನಿತರೆ ಬ್ಯಾಂಡ್ ವಾದ್ಯವೃಂದ ಸಾಥ್ ನೀಡಿದವು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ: ಸಾಹಿತ್ಯ-ಉಪನ್ಯಾಸಕ ಬಿ.ನಾಗರಾಜ್, ಕರ್ತವ್ಯ-ಪೊಲೀಸ್ ಇಲಾಖೆಯ ಸಿಪಿಸಿ ಬಿ.ವೈ.ಸಿದ್ಧಲಿಂಗೇಶ್ವರ, ಪಿಐಗಳಾದ ಮುದ್ದುರಾಜ್, ಶಿವಕುಮಾರ್, ಸೇವೆ-ಗ್ರಾಮ ಆಡಳಿತಾಧಿಕಾರಿಗಳಾದ ತಿಪ್ಪೇಸ್ವಾಮಿ, ರತ್ನಮ್ಮ, ಅಂಗವಿಕಲರ ಅಭಿವೃದ್ಧಿ-ಬಿಐಇಆರ್‌ಟಿ ರಾಜೀವ್, ಸರ್ಕಾರೇತರ ಸಂಸ್ಥೆಯ ನಂದಿನಿ, ವಿಜ್ಞಾನ-ವಿಶ್ವ ಮಾನವ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಎಚ್.ಆರ್.ಸುಧಾ, ಕ್ರೀಡೆ-ನೌಮನ್ ಅಹಮ್ಮದ್ ಷರೀಫ್, ಶ್ರೀಹರಿ, ವೈದ್ಯಕೀಯ-ಪ್ರಸೂತಿ ತಜ್ಞ ಡಾ.ಮಂಜುನಾಥ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.