ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಿ

13adarshkdga4
Published on

ಮಡಿಕೇರಿ: ಜಿಲ್ಲಾಡಳಿತ ವತಿಯಿಂದ ವಿಶಿಷ್ಟ ಮತ್ತು ಅರ್ಥಪೂರ್ಣವಾಗಿ ಜ.26ರಂದು ಗಣರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಆಚರಣೆ ಸಂಬಂಧ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕಳೆದ ಬಾರಿಯಂತೆ ಅರ್ಥಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ಬೆಳಗಿನ ಹಾಗೂ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಸ್ತಬ್ಧಚಿತ್ರಗಳನ್ನು ವಿಷಯ ಆಧರಿತವಾಗಿ ಆಕರ್ಷಣೀಯವಾಗಿ ನಿರ್ಮಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಗಣರಾಜ್ಯೋತ್ಸವ ಆಚರಣೆಗೆ ವಿವಿಧ ಉಪ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ವಿವಿಧ ಕಾರ್ಯಕ್ರಮದಲ್ಲಿ ನಾನಾ ಇಲಾಖೆಗಳ ಅಧಿಕಾರಿಗಳು ತೊಡಗಿಸಿಕೊಳ್ಳಬೇಕು. ಉಪ ಸಮಿತಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಅಂದು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಐತಿಹಾಸಿಕ ಸಂದೇಶವನ್ನು ಒಳಗೊಂಡ ಸ್ತಬ್ಧಚಿತ್ರಗಳನ್ನು ನಿರ್ಮಾಣ ಮಾಡುವಂತೆ ಎಲ್ಲ ಅಭಿವೃದ್ಧಿ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.

ಮೆರವಣಿಗೆಯನ್ನು ನಗರದ ಕೋಟೆ ಆವರಣದಿಂದ ಪ್ರಾರಂಭಿಸಿ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಸಾಗುವಂತೆ ನೋಡಿಕೊಳ್ಳಲು ಮೆರವಣಿಗೆ ಸಮಿತಿಗೆ ಸೂಚಿಸಲಾಯಿತು. ತಿಂಡಿ, ಲಘು ಉಪಾಹಾರ ಜವಾಬ್ದಾರಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೇಲುಸ್ತುವಾರಿ ಆಹಾರ ಸಮಿತಿಗೆ ವಹಿಸಲಾಯಿತು. ಎಲ್ಲರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಗಣರಾಜ್ಯೋತ್ಸವ ದಿನದಂದು ಕುಡಿಯುವ ನೀರು ಒದಗಿಸುವುದು, ಜತೆಗೆ ಸ್ವಚ್ಛತೆ ಸಂಬಂಧ ಅಗತ್ಯವಿರುವ ಕಡೆ ಕಸದಬುಟ್ಟಿ ಇಡುವುದು ಮತ್ತಿತರ ಕ್ರಮಗಳನ್ನು ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಲಾಯಿತು. ವೇದಿಕೆಯನ್ನು ಲೋಕೋಪಯೋಗಿ ಹಾಗೂ ಜಿ.ಪಂ.ಇಂಜಿನಿಯರ್ ವಿಭಾಗದವರು ಅಚ್ಚುಕಟ್ಟಾಗಿ ನಿರ್ಮಾಣ ಮಾಡುವಂತೆ ನಿರ್ದೇಶನ ನೀಡಿದರು.

ವೈದ್ಯಕೀಯ ಕಾಲೇಜಿನ ನಿರ್ದೇಶಕ ಕಾರ್ಯಪ್ಪ, ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದಯ್ಯ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಂ.ಶಿವಕುಮಾರ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ, ಮುದ್ರಾಂಕ ಇಲಾಖೆಯ ಉಪ ನಿರ್ದೇಶಕ ಸಿದ್ದರಾಜು, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಜಗನ್ನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ತಹಸೀಲ್ದಾರ್ ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net