

ಮೈಸೂರು: 76ನೇ ಗಣರಾಜ್ಯೋತ್ಸವ ನಗರದ ಪಂಜಿನ ಕವಾಯತು ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ಸಚಿವರು ಧ್ವಜವಂದನೆ ಸ್ವೀಕರಿಸಿ ಪೆರೇಡ್ ಪರಿವೀಕ್ಷಣೆ ನಡೆಸಿದರು. ಪೊಲೀಸ್ ಇಲಾಖೆ, ಕೆಎಸ್‌ಆರ್‌ಪಿ ತುಕಡಿ, ಗೃಹ ರಕ್ಷಕ ದಳ, ಅಬಕಾರಿ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್, ವಿವಿಧ ಶಾಲಾ ಕಾಲೇಜುಗಳ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಚಿವರು ಗಣರಾಜ್ಯೋತ್ಸವ ಸಂದೇಶವನ್ನು ನೀಡಿದರು.
ಬೆಡೆನ್ ಪೋವೆಲ್ ಪಬ್ಲಿಕ್ ಸ್ಕೂಲ್‌ನ 200 ಮಕ್ಕಳು ದೇಶಭಕ್ತಿ, ಸಮೂಹ ನೃತ್ಯ ಪ್ರದರ್ಶನದೊಂದಿಗೆ ವಿವಿಧೆತೆಯಲ್ಲಿ ಏಕತೆ ಸಂದೇಶ ಸಾರಿದರು. ಮಹರ್ಷಿ ಪಬ್ಲಿಕ್ ಶಾಲೆಯ 250 ಮಕ್ಕಳು ದೇಶ ಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಪ್ರಮತಿ ಪಬ್ಲಿಕ್ ಶಾಲೆಯ 200 ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಆಕರ್ಷಿಸಿತು.
ಸಶಸ್ತ್ರ ವಿಭಾಗದಲ್ಲಿ ಸಶಸ್ತ್ರ ಮೀಸಲು ಪಡೆ-1, ವಿಜಯನಗರ ವಿಭಾಗದ ಪಡೆ-2, ಗೃಹ ರಕ್ಷಕ ಪಡೆ-3, ಸಶಸ್ತ್ರ ರಹಿತ ವಿಭಾಗದಲ್ಲಿ ಎನ್‌ಸಿಸಿ ಆರ್ಮಿ ತುಕಡಿ-1, ಅಬಕಾರಿ ಪಡೆ-2, ಅಗ್ನಿಶಾಮಕ ಸಿಬ್ಬಂದಿ ತುಕಡಿ-3, ಶಾಲಾ ವಿಭಾಗದಲ್ಲಿ ಭಾರತ ಸೇವಾ ದಳ(ಬಾಲಕಿಯರು)-1, ಪೊಲೀಸ್ ಪಬ್ಲಿಕ್ ಸ್ಕೂಲ್-2, ಜೆಎನ್‌ವಿ(ಬಾಲಕಿಯರು) ಪಡೆ-3ನೇ ಬಹುಮಾನ ಪಡೆದುಕೊಂಡಿತು.
ಬ್ಯಾಂಡ್ ಡಿಎಆರ್, ಬ್ಯಾಂಡ್ ಕೆಎಸ್‌ಆರ್‌ಪಿ, ಬ್ಯಾಂಡ್ ಸಿಎಆರ್‌ಗೆ ವಿಶೇಷ ಬಹುಮಾನ ದೊರೆಯಿತು.