ಗಣಪನ ಪ್ರತಿಷ್ಠಾಪನೆಗೆ ಅಂತಿಮ ಸಿದ್ಧತೆ

21-RNR-01
Published on

ಹಾವೇರಿ/ರಾಣೆಬೆನ್ನೂರ: ಕರೊನಾ ಭೀತಿಯ ನಡುವೆಯೂ ನಗರ ಸೇರಿ ಜಿಲ್ಲಾದ್ಯಂತ ಶನಿವಾರ ಗಣೇಶ ಚತುರ್ಥಿ ಆಚರಣೆಗಾಗಿ ಜನತೆ ಭರ್ಜರಿ ತಯಾರಿ ನಡೆಸಿದರು. ಮಾರುಕಟ್ಟೆಯಲ್ಲಿ ಜನಜಂಗುಳಿ ತೀವ್ರವಾಗಿತ್ತು.

ಮೂರ್ತಿ ತಯಾರಕರು ಹಾಗೂ ಕಲಾವಿದರು ಗಣಪತಿ ಮೂರ್ತಿಗೆ ಅಂತಿಮ ರೂಪ ನೀಡುವ ಕಾರ್ಯದಲ್ಲಿ ನಿರತರಾಗಿದ್ದರೆ, ಮತ್ತೊಂದೆಡೆ ಗಣೇಶ ಚತುರ್ಥಿ ಆಚರಣೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರು ಮುಂದಾದ ದೃಶ್ಯ ಮಾರುಕಟ್ಟೆಯಲ್ಲಿ ಕಂಡು ಬಂತು.

ಈ ಬಾರಿ ಜಿಲ್ಲೆಯಲ್ಲಿ ಮಹಾಮಾರಿ ಕರೊನಾ ಸೋಂಕು ಹಾಗೂ ಅತಿವೃಷ್ಟಿಯಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಪ್ರತಿದಿನವೂ ಸರಾಸರಿ 100ರಿಂದ 150 ಪಾಸಿಟಿವ್ ಕೇಸ್​ಗಳು ಪತ್ತೆಯಾಗುತ್ತಿವೆ. ಜನರಲ್ಲಿ ಭೀತಿಯ ವಾತಾವರಣವಿದ್ದರೂ ಹಬ್ಬದಾಚರಣೆಗೆ ಯಾವುದೇ ಹಿಂಜರಿಕೆ ಕಂಡು ಬರಲಿಲ್ಲ. ನಗರದ ಪ್ರಮುಖ ಮಾರುಕಟ್ಟೆಗಳು ಜನರಿಂದ ತುಂಬಿ ಹೋಗಿದ್ದವು.

ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿ ಮೂರ್ತಿ ಸಂಪೂರ್ಣ ನಿಷೇಧಿಸಿರುವ ಹಿನ್ನೆಲೆಯಲ್ಲಿ ಜನತೆ ಮಣ್ಣಿನ ಸುಂದರ ಮೂರ್ತಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ವಿಗೃಹಗಳ ಬೆಲೆಯಲ್ಲಿ ಸ್ವಲ್ಪ ಹೆಚ್ಚಳವಾಗಿದ್ದು, ಜತೆಗೆ ಅತಿವೃಷ್ಟಿಯಿಂದಾಗಿ ತರಕಾರಿ, ಹಣ್ಣು-ಹಂಪಲ ಹಾಗೂ ಬಾಳೆ ಕಂಬಗಳ ಬೆಲೆಯೂ ಅಧಿಕವಾಗಿದೆ.

5 ತರಹದ ಹಣ್ಣಿಗೆ 100ರಿಂದ 150 ರೂ., ಕೆ.ಜಿ. ಸೇಬುಗೆ 80ರಿಂದ 100 ರೂ., ದಾಳಿಂಬೆ 80ರಿಂದ 100 ರೂ., ಮೊಸಂಬಿ 60ರಿಂದ 70 ರೂ., ಚಿಕ್ಕು 40ರಿಂದ 70 ರೂ., ಬಾಳೆಕಂಬ ಜೋಡಿಗೆ 50 ರೂ., ಕಬ್ಬು ಜೋಡಿಗೆ 50 ರೂ. ದರವಿದೆ. ದರ ಹೆಚ್ಚಳವಾದರೂ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಮಾತ್ರ ಕಡಿಮೆಯಾಗಿರಲಿಲ್ಲ.

ಆಚರಣೆಯಲ್ಲಿರಲಿ ಕಾಳಜಿ…! : ಪ್ರಸಕ್ತ ವರ್ಷ ಕರೊನಾ ಮಹಾಮಾರಿ ಎಲ್ಲೆಡೆ ಹರಡಿದೆ. ಹೀಗಾಗಿ ಸರ್ಕಾರ ಸಾರ್ವಜನಿಕವಾಗಿ 4 ಅಡಿ ಹಾಗೂ ಮನೆಯಲ್ಲಿ 2 ಅಡಿ ಮಣ್ಣಿನ ಗಣಪತಿ ಪ್ರತಿಷ್ಠಾಪಿಸಿ, ಮೂರ್ತಿಗಳನ್ನು ವಿಸರ್ಜನೆಗಾಗಿ ಬಾವಿಯ ಬಳಿ ನೂರಾರು ಜನ ಸೇರುವ ಬದಲು ಮನೆಯಲ್ಲಿಯೇ ನೀರಿನ ತೊಟ್ಟಿಯಲ್ಲಿ ಕರಗಿಸಲು ಸೂಚಿಸಿದೆ. ಜತೆಗೆ ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸಿದ ಗಣಪತಿ ನೋಡಲು ಬರುವ ಜನತೆಗೆ ಕಡ್ಡಾಯವಾಗಿ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲು ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ಹೀಗಾಗಿ ಜನತೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂಬುದು ‘ವಿಜಯವಾಣಿ’ ಕಳಕಳಿಯಾಗಿದೆ.

ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರು ಗಣಪತಿಗಳನ್ನು ವಿಸರ್ಜನೆ ಮಾಡಲು ನಗರಸಭೆಯಿಂದ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗುವುದು. ಅದರಲ್ಲಿಯೇ ವಿಸರ್ಜನೆ ಮಾಡಬೇಕು. ಜತೆಗೆ ಕೆಲ ಉದ್ಯಾನದಲ್ಲಿ ನೀರಿನ ತೊಟ್ಟಿ ನಿರ್ವಿುಸಲಾಗುತ್ತಿದೆ. ಅಲ್ಲಿ ಒಬ್ಬೊಬ್ಬರಾಗಿ ಬಂದು ವಿಸರ್ಜನೆ ಮಾಡಬಹುದು. ಗಣಪತಿ ಪ್ರತಿಷ್ಠಾಪನೆಗೆ ಸರ್ಕಾರ ಹೊರಡಿಸಿದ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸಬೇಕು. ಉಲ್ಲಂಘಿಸಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು. | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net