

ಹಾಸನ: ನಗರದ ಸಿಟಿ ಬಸ್ ನಿಲ್ದಾಣ ಬಳಿಯ ಶ್ರೀ ಗಣಪತಿ ಸೇವಾ ಸಂಸ್ಥೆಯಿಂದ ಪ್ರತಿಷ್ಠಾಪಿಸಲಾಗಿರುವ ಶ್ರೀ ಗಣಪತಿ ಪೆಂಡಾಲ್‌ನಲ್ಲಿ ಶನಿವಾರ ಉಚಿತ ರಕ್ತದಾನ ಶಿಬಿರ, ಬಿಪಿ ಮತ್ತು ಶುಗರ್ ಪರೀಕ್ಷೆ ಶಿಬಿರಕ್ಕೆ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಗಣಪತಿ ಸಮಿತಿಯವರು ರಕ್ತದಾನ ಶಿಬಿರ, ರಕ್ತ ಪರೀಕ್ಷೆ, ಬಿಪಿ ಪರೀಕ್ಷೆಯನು ಉಚಿತವಾಗಿ ಮಾಡುತ್ತಿದ್ದಾರೆ. ಭಗವಂತನಿಗೆ ಭಕ್ತಿಯ ಜೊತೆಗೆ ಸಮಾಜಕ್ಕೆ ಒಳ್ಳೆಯದಾಗುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಆರೋಗ್ಯ ಶಿಬಿರದ ಪ್ರಯೋಜನವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು. ಇಂತಹ ಸಮಾಜಮುಖಿ ಕಾರ್ಯಗಳು ಹೆಚ್ಚು ನಡೆಯುತ್ತಿರಲಿ ಎಂದು ಹೇಳಿದರು.
ನಗರಸಭೆ ಆಯುಕ್ತ ನರಸಿಂಹಮೂರ್ತಿ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗುವಂತಹ ಆರೋಗ್ಯ ಶಿಬಿರ ನಡೆಸಿಕೊಂಡು ಬರುತ್ತಿದ್ದಾರೆ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಸಿಕೊಂಡು ಹೋಗಲಿ. ಈ ಶಿಬಿರದ ಯಶಸ್ವಿಗೆ ಕಾರಣರಾಗಿರುವ ಎಲ್ಲರಿಗೂ ಅಭಿನಂದನೆ ಹೇಳುವುದಾಗಿ ತಿಳಿಸಿದರು.
ಸೇವಾ ಸಂಸ್ಥೆ ಅಧ್ಯಕ್ಷ ಡಾ. ಎಚ್. ನಾಗರಾಜು ಮಾತನಾಡಿ, ಸಂಸ್ಥೆ ವತಿಯಿಂದ ಸಾರ್ವಜನಿಕರ ಸಹಬಾಗಿತ್ವದಲ್ಲಿ ಉಚಿತ ರಕ್ತದಾನ ಆರೋಗ್ಯ ಶಿಬಿರ ಜೊತೆಗೆ ಸಕ್ಕರೆ ಕಾಯಿಲೆ ಇರುವವರಿಗೆ ಉಚಿತ ಔಷಧಿ ಮತ್ತು ಮಾತ್ರೆ ಕೊಡಲಾಗುತ್ತಿದೆ. ಬೆಳಗಿನಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಕಾರ್ಯದರ್ಶಿ ಚನ್ನವೀರಪ್ಪ ಮಾತನಾಡಿ, ಗಣಪತಿ ಪ್ರತಿಷ್ಠಾಪನೆ ದಿನದಿಂದ ಇದುವರೆಗೂ ಧಾರ್ಮಿಕ ಕಾರ್ಯ ಮಾಡಲಾಗಿದ್ದರೂ, ಇವತ್ತು ಮಾಡುತ್ತಿರುವುದು ಶ್ರೇಷ್ಠವಾದ ಕಾರ್ಯ. ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದರು. ಮಧ್ಯಾಹ್ನ 12.30 ಕ್ಕೆ ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ಬಂದ ಎಲ್ಲಾ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಂ.ಕೆ. ಕಮಲ್ ಕುಮಾರ್, ಎಚ್.ಎಸ್. ಅನಂತನಾರಾಯಣ, ಎನ್.ಎಸ್. ಶಂಕರ್ ರಾವ್, ನಗರಸಭೆ ಸದಸ್ಯ ಗಿರೀಶ್ ಚನ್ನವೀರಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ನೇತ್ರಾವತಿ ಗಿರೀಶ್, ಸದಸ್ಯೆ ಹೇಮಾಲತ, ಮಂಜುನಾಥ್ ಹಾಗೂ ಹನುಮಂತೇಗೌಡ ಇತರರು ಇದ್ದರು.