

ಮೈಸೂರು: ರಾಜ್ಯಪಾಲ ಥಾವತ್‌ಚಂದ್ ಗೆಹ್ಲೋಟ್ ಶನಿವಾರ ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಸಲುವಾಗಿ ನಗರಕ್ಕೆ ಆಗಮಿಸಿದ ರಾಜ್ಯಪಾಲರು ನಂತರ ಆಶ್ರಮಕ್ಕೆ ಭೇಟಿ ನೀಡಿದರು. ಆಶ್ರಮ ಭೇಟಿ ವೇಳೆಯಲ್ಲಿ ಶುಕವನಕ್ಕೆ ಭೇಟಿ ಪಕ್ಷಿಗಳಿಗೆ ಆಹಾರ ತಿನ್ನಿಸಿ ಸಂಭ್ರಮಿಸಿದರು.
ಗಣಪತಿ ಸಚ್ಚಿದಾನಂದ ಆಶ್ರಮ ಭೇಟಿಯ ನಂತರ ರಾಜ್ಯಪಾಲರು ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆದರು.