

ಸಾಗರ: ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಮಹಾಗಣಪತಿ ರಥೋತ್ಸವ ಅಂಗವಾಗಿ ಸಾರ್ವತ್ರಿಕ ಗಣಹೋಮ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಜಾತ್ರೆ ಪ್ರಧಾನ ಸಂಚಾಲಕ ಟಿ.ವಿ.ಪಾಂಡುರಂಗ ಮಾತನಾಡಿ, ರಥೋತ್ಸವ ಅಂಗವಾಗಿ ನಿರಂತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಶುಕ್ರವಾರ ಗಣ ಹೋಮ ನಡೆದಿದ್ದು, 6 ಸಾವಿರಕ್ಕೂ ಅಧಿಕ ಭಕ್ತರು ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು. ತಾಲೂಕು ಆಡಳಿತ ಹಾಗೂ ಜಾತ್ರಾ ಸಮಿತಿ ವ್ಯವಸ್ಥಿತವಾಗಿ ಜಾತ್ರೆ ನಡೆಸುತ್ತಿದೆ ಎಂದು ತಿಳಿಸಿದರು.
ಕುಡಿಯುವ ನೀರು ಹಾಗೂ ಮೂಲ ಸೌಕರ್ಯಗಳ ಬಗ್ಗೆ ಸಾಗರ ನಗರಸಭೆ ಹೆಚ್ಚಿನ ಶ್ರಮ ವಹಿಸಿದೆ. ಸರ್ಕಾರ ಈಗಾಗಲೇ 55 ಲಕ್ಷ ರೂ.ಗಳನ್ನು ದೇವಾಲಯದ ಜೀರ್ಣೋದ್ಧಾರಕ್ಕೆ ನೀಡಿದೆ. ಅಭಿವೃದ್ಧಿಗೆ ನೀಲಿನಕ್ಷೆ ತಯಾರಿಸಿ ಯೋಜನೆ ರೂಪಿಸಲಾಗಿದೆ. ಸರ್ಕಾರದ ಜತೆಗೆ ಶಾಸಕರ ನಿಧಿಯಿಂದ ಅನುದಾನ ನೀಡುವುದಾಗಿ ಗೋಪಾಲಕೃಷ್ಣ ಭರವಸೆ ನೀಡಿದ್ದಾರೆ ಎಂದರು.
ಗಣಹೋಮದ ಧಾರ್ಮಿಕ ಕಾರ್ಯಕ್ರಮಗಳು ದೇವಾಲಯದ ಅರ್ಚಕ ಜಗದೀಶ್ ಭಟ್ ನೇತೃತ್ವದಲ್ಲಿ ನೆರವೇರಿತು. ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ವಿವಿಧ ಸಮಿತಿಯ ಐ.ವಿ.ಹೆಗಡೆ, ಜಯರಾಮ್, ಅರವಿಂದ ರಾಯ್ಕರ್, ಬಿ.ಎಚ್.ಲಿಂಗರಾಜ್, ದಿನೇಶ್, ಗೌತಮ್, ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಪ್ರಮಿಳಾಕುಮಾರಿ, ಪುರೋಹಿತರಾದ ಬಾಲಚಂದ್ರ ಜೋಯ್ಸ, ತಮ್ಮಣ್ಣ ಭಟ್, ಮಂಜು ಭಟ್ ಇತರರಿದ್ದರು.