

ಹಾಸನ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಸಲ್ಲಿಸಿರುವ ಸಾಧಕರು ಹಾಗೂ ವಿವಿಧ ಸಂಸ್ಥೆಗಳ ಪ್ರತಿನಿಧಿಗಳನ್ನು ನಗರದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಮಾಧ್ಯಮ ಕ್ಷೇತ್ರದಿಂದ ದಿಗ್ವಿಜಯ ಸುದ್ದಿವಾಹಿನಿ ಜಿಲ್ಲಾ ವರದಿಗಾರ ಡಿ.ಐ. ಕುಶ್ವಂತ್, ಕೃಷಿ ವಿವಿ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 11 ಚಿನ್ನ, 6 ಬೆಳ್ಳಿ ಮತ್ತು 4 ಕಂಚಿನ ಪದಕ ಪಡೆದು ಸಾಧನೆ ಮಾಡಿರುವ ಚನ್ನರಾಯಪಟ್ಟಣ ತಾಲೂಕು ಹುಲ್ಲೇನಹಳ್ಳಿಯ ಎ.ಎಂ. ಸಹನ ಅವರನ್ನು ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಶಾಸಕ ಪ್ರೀತಮ್ ಗೌಡ ಮತ್ತಿತರ ಗಣ್ಯರು ಸನ್ಮಾನಿಸಿದರು.
ಶೌರ್ಯ ಪ್ರಶಸ್ತಿ ಪಡೆದಿರುವ ಹಿರೀಸಾವೆಯ ಜೆ.ಪಿ. ರಾಜು ಮತ್ತು ಬೊಮ್ಮನಹಳ್ಳಿಯ ಲೆಫ್ಟಿನೆಂಟ್ ಕರ್ನಲ್ ಬಿ. ದೊರೆರಾಜು, ಹಾಸನ ನಗರಸಭೆ ಪೌರ ಕಾರ್ಮಿಕರಾದ ಶಿವಸ್ವಾಮಿ ಮತ್ತು ಮುನಿಯಪ್ಪ, ತಮ್ಮ ವೃತ್ತಿ ಬದುಕಿನಲ್ಲಿ ಅಪಘಾತ ಇಲ್ಲದಂತೆ ಬಸ್ ಚಾಲನೆ ಮಾಡಿರುವ ಕೆಎಸ್‌ಆರ್‌ಟಿಸಿ ಹೊಳೆನರಸೀಪುರ ಘಟಕದ ಬಸ್ ಚಾಲಕ ಕೆ.ಎನ್. ಪಾಂಡುರಂಗ, ಗೃಹರಕ್ಷಕ ದಳ ದೊಡ್ಡಮಗ್ಗೆ ಘಟಕದ ಕೆ.ಸಿ. ಕೇಶವಮೂರ್ತಿ, ಹಾಸನ ಸರ್ಕಾರಿ ಕಲಾ ಕಾಲೇಜು ಎನ್‌ಸಿಸಿ ಕೆಡೆಟ್ ಎಸ್. ಕಾರ್ತಿಕ್ ಮತ್ತು ಸಕಲೇಶಪುರ ತಾಲೂಕು ಬಾಗೆ ಜೆಎಸ್‌ಎಸ್ ವಿದ್ಯಾಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕ ಎಚ್.ಎಸ್. ನವೀನ್ ಅವರನ್ನು ಸನ್ಮಾನಿಸಲಾಯಿತು.
ಉದ್ದ ಜಿಗಿತದಲ್ಲಿ ಕಂಚಿನ ಪದಕ ಪಡೆದಿರುವ ಪುರುಷೋತ್ತಮ್ ರಾಜಘಟ್ಟ, ಕೃಷಿ ಕ್ಷೇತದ ಸಾಧನೆಗಾಗಿ ಸಕಲೇಶಪುರ ತಾಲೂಕು ಹಂಚುಗೋಡನಹಳ್ಳಿಯ ಎಚ್.ಎಲ್. ನರೇಶ್ ಮತ್ತು ಚನ್ನರಾಯಪಟ್ಟಣ ತಾಲೂಕು ಬಳದರೆ ಗ್ರಾಮದ ಬಿ.ಜಿ. ಮಂಜೇಗೌಡ, ಸಮಾಜ ಸೇವೆಗಾಗಿ ಹಿರಿಯ ವಕೀಲ ಬಿ. ಚಂದ್ರಶೇಖರ್, ಅಂಗವಿಕಲ ಕ್ರೀಡಾಪಟು ಚನ್ನರಾಯಪಟ್ಟಣ ತಾಲೂಕು ಹೊನ್ನಮಾರನಹಳ್ಳಿಯ ಎಚ್.ಡಿ. ಧರಣಿ, ವೈದ್ಯಕೀಯ ಕ್ಷೇತ್ರದಿಂದ ಶಾಂತಿಗ್ರಾಮ ಸಮದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಿ. ಕಿರಣ್‌ಕುಮಾರ್ ಸನ್ಮಾನಿತರಾದರು.
ಪರಿಸರ ಸೇವೆಗಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಏಕಲವ್ಯ ಓಪನ್ ಗ್ರೂಪಿನ ರೋವರ್ಸ್ ಸ್ಕೌಟ್ ಲೀಡರ್ ಆರ್.ಜಿ. ಗಿರೀಶ್ ಮತ್ತು ಎಂಸಿಇ ಕಾಲೇಜು ಸಹಾಯಕ ಪ್ರಾಧ್ಯಾಪಕ ಎಚ್.ಎಸ್. ಚಂದ್ರಶೇಖರ್, ಕಲಾ ಕ್ಷೇತ್ರದಲ್ಲಿನ ಸಾಧನೆಗಾಗಿ ಅರಸೀಕೆರೆ ತಾಲೂಕು ದೊಡ್ಡಮೇಟಿಕುರ್ಕೆ ಆಸ್ಪತ್ರೆ ಸಿಬ್ಬಂದಿ ವಿ.ಎಚ್. ಚಂದನ, ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಅಡಿ ಜಿಲ್ಲೆಯಲ್ಲಿ ಹೆಚ್ಚು ಜನರಿಗೆ ಸೌಲಭ್ಯ ಒದಗಿಸಿರುವ ಹಾಸನದ ಜನಪ್ರಿಯ ಆಸ್ಪತ್ರೆ ಅಧ್ಯಕ್ಷ ಡಾ. ವಿ.ಕೆ. ಅಬ್ದುಲ್ ಬಶೀರ್ ಸನ್ಮಾನ ಸ್ವೀಕರಿಸಿದರು.