

ಹರಪನಹಳ್ಳಿ: ಸರ್ವ ಧರ್ಮಗಳ ಶ್ರೇಯಸ್ಸನ್ನು ಬಯಸುವ ಏಕೈಕ ಧರ್ಮವೆಂದರೆ ಅದು ವೀರಶೈವ ಲಿಂಗಾಯತ ಧರ್ಮ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.
ಪಟ್ಟಣದಲ್ಲಿ ಉತ್ತಂಗಿ ಕಬ್ಬಿಣ ಕಂತಿ ಮಠದ ಶಾಂತಮ್ಮ ವೀರಯ್ಯ ಮೆಮೋರಿಯಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಎಂ.ಹಾಲಯ್ಯ ಶಾಸ್ತ್ರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಭಾನುವಾರ ಮಾತನಾಡಿದರು. ಅಖಂಡ ವೀರಶೈವ ಸಮಾಜಕ್ಕೆ ಪ್ರಾಚೀನ ಇತಿಹಾಸವಿದ್ದು, ಅಪಾರ ಜ್ಞಾನ ಸಂಪತ್ತು ಹೊಂದಿರುವ ಸಮಾಜವನ್ನು ಕೆಲ ಸ್ವಾರ್ಥ ಮನಸ್ಸುಳ್ಳುವರು ಒಡೆದು ಆಳುವ ಹುನ್ನಾರ ನಡೆಸುತ್ತಿದ್ದಾರೆ. ಸಮಾಜದವರು ಮೂಲ ಧರ್ಮವನ್ನು ಮರೆತು ಕವಲು ದಾರಿಯಲ್ಲಿ ಸಾಗುತ್ತಿರುವುದು ಬೇಸರದ ಸಂಗತಿ ಎಂದರು.
ಅಖಂಡ ವೀರಶೈವ ಲಿಂಗಾಯತ ಧರ್ಮದ ಉಳಿವಿಗಾಗಿ ಮಠಾಧೀಶರೊಂದಿಗೆ ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಗಟ್ಟಿ ದ್ವನಿ ಎತ್ತುವ ಅಗತ್ಯವಿದೆ, ಲಿಂಗಾಯತ ಧರ್ಮದಲ್ಲಿ ಎಷ್ಟೇ ಉಪ ಜಾತಿಗಳಿದ್ದರೂ ವೀರಶೈವ ಲಿಂಗಾಯತ ಧರ್ಮ ಒಂದೇ ಆಗಿದ್ದು, ಈ ಧರ್ಮವನ್ನು ಬಸವಣ್ಣ ಅವರೇ ಒಪ್ಪಿ ಮುಂದುವರಿದು ಸಾಗಿದ್ದರು ಎಂದರು.
ಸೆಪ್ಟೆಂಬರ್‌ನಲ್ಲಿ ಜಾತಿ ಸಮೀಕ್ಷೆ ನಡೆಸಲಾಗುತ್ತಿದ್ದು, ಎಲ್ಲ ಉಪ ಪಂಗಡದವರು ವೀರಶೈವ ಲಿಂಗಾಯತ ಎಂದು ಕಾಲಂನಲ್ಲಿ ನಮೂದಿಸಬೇಕು. ರಾಜ್ಯ ಸರ್ಕಾರದ ಪ್ರಶಸ್ತಿಗಳು ಲಾಬಿ ಮಾಡುವವರಿಗೆ ಮಾತ್ರ ಲಭಿಸುತ್ತಿರುವುದು ದುರಂತ. ಇಂತಹ ಕಾಲದಲ್ಲೂ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಛಾಪು ಮೂಡಿಸಿದ ಹಾಲಯ್ಯ ಶಾಸ್ತ್ರಿ ಅವರಿಗೆ ಪ್ರಶಸ್ತಿ ದೊರಕಿರುವುದು ಪ್ರಾಮಾಣಿಕ ವೃತ್ತಿಗೆ ದಕ್ಕಿದ ಫಲವಾಗಿದೆ ಎಂದರು.
ಕಷ್ಟದ ಜೀವನ ಶಿಸ್ತಿನ ಪಾಠ ಕಲಿಸುತ್ತದೆ. ನಿರಂತರ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ. ಧರ್ಮ ನಿಷ್ಠೆ ಗುರುವಿನ ಮೇಲಿನ ಗೌರವ -ಘನತೆಯನ್ನು ಇಮ್ಮಡಿಗೊಳಿಸುತ್ತದೆ, ಇಂದಿನ ಯುವ ಜನತೆಯಲ್ಲಿ ಸಂಸ್ಕಾರದ ಅಗತ್ಯವಿದೆ ಎಂದು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಂ.ರಾಜಣ್ಣ, ಚಿರಸ್ತಹಳ್ಳಿಯ ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ, ಕೆ.ಎಂ.ಭಾರತಿ, ಕೆ.ಎಂ.ಚನ್ನಯ್ಯ, ನುರೂಪನಂದ ಸ್ವಾಮಿ, ಕೆ.ಎಂ.ಸಚಿನ್, ನಂದಿಹಳ್ಳಿ ಚನ್ನಯ್ಯ, ಎಸ್. ಎಂ.ಆಶಾ, ಪಿ.ಬಸವರಾಜ್, ಬೆನ್ನೂರು ಶಶಿಧರ್ ಇತರರಿದ್ದರು.