ಗಣತಿದಾರರಿಗೆ ಸ್ಪಷ್ಟ ಮಾಹಿತಿ ನೀಡಿ; ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಮನವಿ

05_HSN_04
Published on

ಹಾಸನ: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯು ಸೋಮವಾರದಿಂದ ಪ್ರಾರಂಭವಾಗಿದ್ದು ಮೇ 17 ವರೆಗೆ ಜಿಲ್ಲೆಯಲ್ಲಿ ನಡೆಯಲಿದೆ. ಗಣತಿ ದಾರರು ಮನೆ ಮನೆ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮನೆ ಯಜಮಾನರು ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯನ್ನು ಮುಂಚಿತವಾಗಿ ತೆಗೆದಿರುಸಿಕೊಂಡಿದ್ದು, ಗಣತಿದಾರರಿಗೆ ಸ್ಪಷ್ಟ ಮಾಹಿತಿ ನೀಡುವ ಮೂಲಕ ಸಮೀಕ್ಷೆಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಕೋರಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಮೀಕ್ಷೆ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗಣತಿದಾರರು ಬೆಳಗ್ಗೆ 6.30 ರಿಂದ ಸಂಜೆ 6 ಗಂಟೆಯವರೆಗೆ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಈ ವೇಳೆ ಗೌರವಯುತವಾಗಿ ಧೈರ್ಯವಾಗಿ ತಮ್ಮ ಜಾತಿ ಯಾವುದು ಎಂಬ ನಿಖರ ಮಾಹಿತಿಯನ್ನು ಗಣತಿದಾರರಿಗೆ ನೀಡಿ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇರುವ ಜಾತಿಗಳನ್ನು ಉಪ ವರ್ಗೀಕರಣ ಮಾಡಿ ಒಳಮೀಸಲಾತಿಯನ್ನು ಜಾರಿ ಮಾಡಲು ಸರ್ಕಾರವು ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ವ್ಯಕ್ತಿ ವಿಚಾರಣಾ ಆಯೋಗವನ್ನು ನೇಮಿಸಿ ಒಳಮೀಸಲಾತಿ ವರ್ಗೀಕರಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಉಪ ವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶಗಳನ್ನು ಸಂಗ್ರಹಿಸಲು ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ಸಮೀಕ್ಷೆಯಿಂದ ತಪ್ಪಿಹೋಗದಂತೆ ನಿಗಾ ವಹಿಸಲು ಪ್ರತಿ ತಾಲೂಕಿಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಹೇಳಿದರು.

ಸಮೀಕ್ಷೆಯು ಸಂಪುರ್ಣ ಮೊಬೈಲ್ ಆ್ಯಪ್ ನಿಂದ ಕೂಡಿರುತ್ತದೆ. ಹಾಸನ ಜಿಲ್ಲೆಯಲ್ಲಿ ಒಟ್ಟು 1968 ಮತಗಟ್ಟೆಗಳಿದ್ದು, ಪ್ರತಿಯೊಂದು ಮತಗಟ್ಟೆಗೆ ಶಿಕ್ಷಕರನ್ನು ನೇಮಕಾತಿ ಮಾಡಿ ಪ್ರತಿ ಮನೆಗಳನ್ನು ಸಮೀಕ್ಷೆ ಮಾಡಲಾಗುವುದು. ಒಟ್ಟು 1968 ಗಣತಿದಾರರನ್ನು ನೇಮಕ ಮಾಡಲಾಗಿದೆ. ಯಾವುದಾದರೂ ಮತಗಟ್ಟೆಯಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳು 150ಕ್ಕಿಂತ ಹೆಚ್ಚು ಇದ್ದು, ಮತ್ತೊಬ್ಬ ಹೆಚ್ಚುವರಿ ಗಣತಿದಾರರನ್ನು ಸದರಿ ಮತಗಟ್ಟೆಗೆ ನೇಮಕಾತಿ ಮಾಡಲಾಗುವುದು ಎಂದರು.

ಮೊದಲನೇ ಹಂತದ ಸಮೀಕ್ಷೆಯು ಮೇ 5 ರಿಂದ ಮೇ 17 ರವರೆಗೆ ಮನೆ ಮನೆ ಭೇಟಿಯ ಮೂಲಕ ಪರಿಶಿಷ್ಟ ಜಾತಿ ಸಮೀಕ್ಷೆ ನಡೆಸಲಾಗುವುದು. ಎರಡನೇ ಹಂತ ಒಂದು ವೇಳೆ, ಸಮೀಕ್ಷಾದಾರರು ಮನೆಗೆ ಬಂದಂತಹ ಸಂದರ್ಭದಲ್ಲಿ ಮನೆಯವರು ಇಲ್ಲದಿದ್ದ ಪಕ್ಷದಲ್ಲಿ ಮೇ 19 ರಿಂದ ಮೇ 21 ರವರೆಗೆ ಸಮೀಕ್ಷೆ ಬ್ಲಾಕ್‌ಗಳಲ್ಲಿ ಅಥವಾ ಮತಗಟ್ಟೆ ಕೇಂದ್ರಗಳ ಶಿಬಿರದಲ್ಲಿ ಮನೆ ಮನೆ ಭೇಟಿ ಅವಧಿಯಲ್ಲಿ ಬಿಟ್ಟು ಹೋದ ಪರಿಶಿಷ್ಟ ಜಾತಿಯ ಕುಟುಂಬಗಳ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುವುದು. ಮೂರನೇ ಹಂತದಲ್ಲಿ ಮನೆ ಮನೆ ಭೇಟಿ ಅವಧಿ ಹಾಗೂ ಶಿಬಿರಗಳಲ್ಲೂ ಸಮೀಕ್ಷೆಯಿಂದ ಬಿಟ್ಟು ಹೋದಂತಹ ಪರಿಶಿಷ್ಟ ಜಾತಿಯ ಕುಟುಂಬಗಳು ಮೇ 19 ರಿಂದ 23 ರವರೆಗೆ ವೆಬ್‌ಸೈಟ್‌ನಲ್ಲಿ ಸ್ವಯಂ ಘೋಷಿತವಾಗಿ ಆಧಾರ್ ಸಂಖ್ಯೆಯೊಡನೆ ಜಾತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

ಸಮೀಕ್ಷೆಯಲ್ಲಿ ಉಂಟಾಗುವ ಯಾವುದಾದರೂ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲು ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಸಂಬಂಧಿಸಿದ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಅವರನ್ನು ಸಂಪರ್ಕಿಸಬಹುದು. ಸಮೀಕ್ಷಾ ಕಂಟ್ರೋಲ್ ರೂಂ ದೂರವಾಣಿ ವಿವರ ಈ ಕೆಳಕಂಡಂತಿದೆ. ಆಲೂರು ತಾಲ್ಲೂಕು ದೂರವಾಣಿ ಸಂಖ್ಯೆ 08170-218467,9480843140, ಅರಕಲಗೂಡು 9480843141, ಅರಸೀಕೆರೆ 9480843142, ಬೇಲೂರು 9480843143, ಚನ್ನರಾಯಪಟ್ಟಣ 9480843144 ಹಾಸನ 9480843145, ಹೊಳೆನರಸೀಪುರ 9480843146, ಸಕಲೇಶಪುರ 9480843147 ದೂರವಾಣಿ ಸಂಖ್ಯೆ ಕರೆ ಮಾಡಿ ತೊಂದರೆಗಳ ಬಗೆಹರಿಸಿಕೊಳ್ಳಬಹುದು ಎಂದರು.

ಮನೆ ಮನೆಗೆ ಆಗಮಿಸುವ ಸಮೀಕ್ಷಾದಾರರಿಗೆ ಕುಟುಂಬದ ಮುಖ್ಯಸ್ಥ ಅಥವಾ ಜವಾಬ್ದಾರಿಯುತ ವ್ಯಕ್ತಿ ಅವಶ್ಯಕ ದಾಖಲೆಯಾದ ರೇಷನ್ ಕಾರ್ಡ್, ಆಧಾರ್ ಸಂಖ್ಯೆಯನ್ನು ಮುಂಚಿತವಾಗಿ ತೆಗೆದಿಟ್ಟುಕೊಂಡು ಸಮೀಕ್ಷಾದಾರರಿಗೆ ನೀಡುವ ಮೂಲಕ ಸಹಕರಿಸಬೇಕು. ಪರಿಶಿಷ್ಟ ಜಾತಿಯಲ್ಲಿ ಒಟ್ಟು 101 ಜಾತಿಗಳಿದ್ದು, 98 ಜಾತಿಗಳು ನೇರವಾಗಿ ಜಾತಿ ಹೆಸರುಗಳ ಮೂಲಕವೇ ದಾಖಲಾಗುತ್ತದೆ. ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಎಂದು ಜಾತಿಯ ಹೆಸರನ್ನು ಹೇಳುವ ಕುಟುಂಬಗಳು ಇವುಗಳ ಮೂಲ ಜಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಉದಾಹರಣೆಗೆ ಹೊಲಯ, ಒಲೆಯರ್, ಛಲವಾದಿ, ಮಾದಿಗ, ಮಾದರ ಇತ್ಯಾದಿ. ಅಂತರಜಾತಿ ವಿವಾಹವಾದ ಪ್ರಕರಣದಲ್ಲಿ ಹೆಂಡತಿ ಅಥವಾ ಸೊಸೆಗೆ ಬೇರೆ ಜಾತಿ ಇರಬಹುದು. ಈ ಮಾಹಿತಿಯನ್ನು ತಿಳಿದು ನಮೂದಿಸಬೇಕು ಎಂದರು.

ಸಮೀಕ್ಷೆಯಲ್ಲಿ ಮೂಲ ಜಾತಿಯನ್ನು ನಮೂದಿಸುವುದರ ಜೊತೆಗೆ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಯನ್ನು ಹೇಳುವುದು ಕೂಡ ಕಡ್ಡಾಯವಾಗಿರುತ್ತದೆ. ಉದಾಹರಣೆಗೆ ವೃತ್ತಿ (ಕುಲ ಕಸುಬು), ಶೈಕ್ಷಣಿಕ ವಿದ್ಯಾರ್ಹತೆ, ಜಮೀನಿನ ವಿವರ, ವಾರ್ಷಿಕ ಆದಾಯ, ಜಾನುವಾರುಗಳ ಸಂಖ್ಯೆ, ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡಿರುವ ಬಗ್ಗೆ ವಿವರ, ಸ್ಥಿರ ಮತ್ತು ಚರಾಸ್ತಿ ವಿವರ, ಮನೆ ಹಾಗೂ ನಿವೇಶನ, ಕುಡಿಯುವ ನೀರಿನ ಮೂಲ, ಶೌಚಾಲಯ, ಅಡುಗೆಗೆ ಬಳಸುವ ಇಂಧನ, ರಾಜಕೀಯ ಸ್ಥಿತಿಗತಿ ಇತ್ಯಾದಿ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದರು.

ಸಮೀಕ್ಷೆದಾರರು ಕೇಳುವ ಈ ಎಲ್ಲ ಪ್ರಶ್ನೆಗಳಿಗೆ ಸಾವಕಾಶವಾಗಿ ಉತ್ತರಿಸಬೇಕು. ನಂತರ ವಿವರವನ್ನು ನೀಡಿದವರು ಸ್ವಯಂ ದೃಢೀಕರಣ ಪ್ರಮಾಣ ಪತ್ರಕ್ಕೆ ಸಹಿಯನ್ನು ಹಾಕಬೇಕು. ಸಮೀಕ್ಷೆಗೆ ಒಳಗಾದ ಪ್ರತಿ ಕುಟುಂಬಕ್ಕೆ ಒಂದು ಅರ್ಜಿ ಸಂಖ್ಯೆ ಜನರೇಟ್ ಆಗಲಿದ್ದು, ಕುಟುಂಬದ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ. ಆ ಒಟಿಪಿಯನ್ನು ಹೇಳುವ ಮೂಲಕ ಸಮೀಕ್ಷೆ ಪೂರ್ಣಗೊಳ್ಳುವುದು. ಆ ಅರ್ಜಿ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ನಲ್ಲಿ ನಮೂದು ಮಾಡುವ ಮೂಲಕ ತಾವು ಹೇಳಿರುವ ಮಾಹಿತಿಯನ್ನು ಪರಿಶೀಲಿಸಿಕೊಳ್ಳಬಹುದು ಎಂದು ಹೇಳಿದರು.

ಸಮೀಕ್ಷೆಯಲ್ಲಿ ಘೋಷಿಸಿಕೊಳ್ಳುವ ಜಾತಿಯ ಹೆಸರು ಪರಿಶಿಷ್ಟ ಜಾತಿ ಸಮೀಕ್ಷೆಗೆ ಮಾತ್ರ. ಇದು ಜಾತಿ ಪ್ರಮಾಣ ಪತ್ರ ಪಡೆಯಲು ದೃಢೀಕರಣವಲ್ಲ. ಸಮೀಕ್ಷಾದಾರರು ಜಾತಿ ಪ್ರಮಾಣ ಪತ್ರವನ್ನು ನೀಡುವುದಿಲ್ಲ. ಹಾಸನದಲ್ಲಿ ನಡೆಯುವ ಪರಿಶಿಷ್ಟ ಜಾತಿ ಸಮೀಕ್ಷಾ ಕಾರ್ಯಕ್ಕೆ ಸಮುದಾಯದ ಎಲ್ಲಾ ಬಾಂಧವರು ಸಹಕರಿಸುವ ಮೂಲಕ ಯಶಸ್ವಿಗೊಳಿಸಬೇಕಾಗಿ ಕೋರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ದೂದ್ ಫಿರ್, ಸಮುದಾಯದ ಮುಖಂಡರಾದ ಶಂಕರ್ ರಾಜ್, ಕಲಿವೀರ್, ಸಂದೇಶ್, ವಿಜಯ ಕುಮಾರ್, ಕೃಷ್ಣದಾಸ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net