ಗಣಕ ವಿಜ್ಞಾನಕ್ಕೆ ಗಣಿತ ಆಧಾರ

CUK
Published on

ಕಲಬುರಗಿ: ಗಣಿತ ಮತ್ತು ಅಂಕಿಅಂಶಗಳು ಗಣಕ ವಿಜ್ಞಾನಕ್ಕೆ ಆಧಾರ. ಇವುಗಳಿಲ್ಲದೆ ಸಮಾಜದಲ್ಲಿನ ಸಮಸ್ಯೆಗಳಿಗೆ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗುರುರಾಜ್ ಮುಕರಂಬಿ ಹೇಳಿದರು.

ವಿಶ್ವವಿದ್ಯಾಲಯದ ಗಣಿತ ವಿಭಾಗವು ಗಣಿತ ಮತ್ತು ಗಣಕಯಂತ್ರದಲ್ಲಿ ಬಿ.ಟೆಕ್ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಆಯೋಜಿಸಿದ್ದ ಇಂಡಕ್ಷನ್ ಕಾರ್ಯಕ್ರಮದ ಸಮಾರೋಪದಲ್ಲಿ ಡಿಜಿಟಲ್ ಇಮೇಜ್ ಪ್ರೊಸೆಸ್ಸಿಂಗ್‌ನಲ್ಲಿನ ಸವಾಲು ಮತ್ತು ವಿದ್ಯಾರ್ಥಿಗಳ ಭವಿಷ್ಯದ ವೃತ್ತಿ ಜೀವನಕ್ಕಾಗಿ ಯಂತ್ರ ಕಲಿಕೆ, ಕೃತಕ ಬುದ್ಧಿಮತ್ತೆ ಮತ್ತು ಡೇಟಾ ವಿಜ್ಞಾನದ ಪ್ರಾಮುಖ್ಯತೆ ಕುರಿತು ಮಾತನಾಡಿದರು.

ಐಟಿ ಕ್ಷೇತ್ರಕ್ಕೆ ಹೋಗಲು ಬಯಸುವವರಿಗೆ ಗಣಿತ ಮತ್ತು ಕಂಪ್ಯೂಟಿಂಗ್ ಜ್ಞಾನವಿರಬೇಕು. ಜಾಗತಿಕ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ ಅಗತ್ಯತೆ ಹೆಚ್ಚಾಗಿದ್ದು, ಆರ್ಥಿಕ ಅಭಿವೃದ್ಧಿಗಾಗಿ ಜಾಗತಿಕ ರಾಷ್ಟ್ರಗಳ ನಡುವೆ ಸ್ಪರ್ಧೆ ನಡೆಯುತ್ತಿದೆ. ಇತ್ತೀಚಿಗೆ ಭಾರತೀಯ ಇಸ್ರೋ ಸಂಸ್ಥೆಯು ಚಂದ್ರಯಾನ-೩ನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಯಶಸ್ವಿಯೂ ಆಗಿದೆ ಎಂದರು.

ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನ ರಾಷ್ಟ ನಿರ್ಮಾಣ ಮತ್ತು ಸಮಾಜದ ಸಮಸ್ಯೆ ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹೀಗಾಗಿ ಈ ದಿಕ್ಕಿನಲ್ಲಿ ಹೆಚ್ಚಿನ ಐಟಿ ಕಂಪನಿಗಳು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಇದೀಗ, ಮೈಕ್ರೋಸಾಫ್ಟ್ ನ್ಯೂ ಪ್ರಾಜೆಕ್ಟ್ ರೂಮಿ ಮತ್ತು ಗೂಗಲ್ ಮುಂಬರುವ ಹೊಸ ಪ್ರಾಜೆಕ್ಟ್ ಗೂಗಲ್ ಜೆಮಿನಿ ನಡುವಿನ ಜಾಗತಿಕ ಸ್ಪರ್ಧೆಗಳು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವಿಶ್ವದ ಕೃತಕ ಬುದ್ಧಿಮತ್ತೆ ಉದ್ಯಮಕ್ಕೆ ಆಘಾತ ನೀಡಲಿವೆ.

ಇದು ಸಂಶೋಧನಾ ಸಮುದಾಯಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಈ ತಂತ್ರಜ್ಞಾನವು ಪ್ರಸ್ತುತ ಸಂದರ್ಭದ ಸಮಸ್ಯೆ ಪರಿಹರಿಸಲು ಸಹಕಾರಿಯಾಗಲಿದೆ. ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ಕ್ರಾಂತಿಯು ಅನೇಕ ಉದ್ಯೋಗಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.
ಗಣಿತ ವಿಭಾಗದ ಮುಖ್ಯಸ್ಥ ಡಾ.ಜನಾರ್ಧನ ರೆಡ್ಡಿ ಮಾತನಾಡಿದರು. ಡಾ.ಮೇಘಾ ಖಂಡೇಲ್‌ವಾಲ್, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net