ಗಣ, ನವ, ಮೃತ್ಯುಂಜಯ ಹೋಮ ಸಂಪನ್ನ

Maha Ganapa
Published on

ಚಿತ್ರದುರ್ಗ: ಹಿಂದು ಮಹಾಗಣಪತಿ ಮಹೋತ್ಸವದ ಅಂಗವಾಗಿ ಮಂಗಳವಾರ ಗಣ, ನವ, ಮೃತ್ಯುಂಜಯ ಹೋಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತು.

ಬೆಳಗ್ಗೆ 9ಕ್ಕೆ ಆರಂಭವಾದ ಹೋಮದ ಪೂಜಾ ವಿಧಿ-ವಿಧಾನ ಮಧ್ಯಾಹ್ನ 2.30ಕ್ಕೆ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು. ನವ ಧಾನ್ಯ, ವಸ್ತ್ರ ಸೇರಿ ಇತರೆ ಪೂಜಾ ಸಾಮಗ್ರಿ ಸಮರ್ಪಿಸಲಾಯಿತು.

ದುರ್ಗದ ಅಧಿದೇವತೆ ಏಕನಾಥೇಶ್ವರಿ, ರಾಜಮಾತೆ ಉಚ್ಚಂಗಿಯಲ್ಲಮ್ಮ, ನಗರದೇವತೆಗಳಾದ ಬರಗೇರಮ್ಮ, ಗೋಪಾಲಪುರ ರಸ್ತೆಯ ದುರ್ಗಾ ದೇವಿ, ಕಾಳಿಕಾಮಠೇಶ್ವರಿ, ಮಲೆನಾಡು ಚೌಡೇಶ್ವರಿ, ಸಿಗಂದೂರು ಚೌಡೇಶ್ವರಿ, ಬನಶಂಕರಿ, ಗೊಕಟ್ಟೆ ಕಣಿವೆಮಾರಮ್ಮ, ಬುಡ್ಡಾಂಬಿಕಾ, ಕನ್ಯಾಕಾ ಪರಮೇಶ್ವರಿ, ಆದಿಶಕ್ತಿ ಮಾರಿಕಾಂಬ ದೇವಿ, ರೈಲ್ವೆ ಸ್ಟೇಷನ್ ಸಮೀಪದ ಶಕ್ತಿದೇವತೆ, ಕೋಳಿಬುರುಜನಹಟ್ಟಿ ದುರ್ಗಮ್ಮ ದೇವಿ ಸೇರಿ 13ಕ್ಕೂ ಹೆಚ್ಚು ದೇವತೆಗಳ ಉತ್ಸವ ಮೂರ್ತಿಗಳು ಪಾಲ್ಗೊಂಡಿದ್ದವು.

ಶಕ್ತಿದೇವತೆಗಳ ದರ್ಶನವನ್ನು ಕೂಡ ಸಂಜೆಯವರೆಗೂ ಅಸಂಖ್ಯಾತ ಭಕ್ತರು ಪಡೆದುಕೊಂಡರು. ದೇಗುಲಗಳಿಗೆ ಕರೆದೊಯ್ಯುವ ಮುನ್ನ ಹೋಮಕುಂಡಕ್ಕೆ ಎಲ್ಲ ದೇವತೆಗಳನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿಸಲಾಯಿತು. ಇದೇ ವೇಳೆ ಕಹಳೆ, ಉರುಮೆ, ಡೊಳ್ಳು, ನಾದಸ್ವರ, ತಮಟೆ ಸೇರಿ ಇತರೆ ಜನಪದ ಕಲಾತಂಡಗಳಿಂದ ಮಂಗಳವಾದ್ಯಗಳು ಮೊಳಗಿದವು.

ಮಹಾಗಣಪ, ದೇವತೆಗಳ ಮುಂಭಾಗದಲ್ಲಿ ವಿಶ್ವ ಹಿಂದು ಪರಿಷದ್, ಬಜರಂಗದಳ, ಹಿಂದು ಮಹಾಗಣಪತಿ ಉತ್ಸವ ಸಮಿತಿ ಕಾರ್ಯಕರ್ತರು ಸೇರಿ ಅನೇಕ ಭಕ್ತರಿಂದ ಜಯಘೋಷ ಮೊಳಗಿತು. ಈ ದೃಶ್ಯವನ್ನು ಅನೇಕರು ಕಣ್ತುಂಬಿಕೊಂಡರು. ಗಣಪನ ಮುಂಭಾಗ ಮೊಬೈಲ್‌ಗಳ ಮೂಲಕ ಭಾವಚಿತ್ರಗಳನ್ನು ಸೆರೆಹಿಡಿಯಲು ಮುಂದಾದರು.

ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಶಾಂತವೀರ ಶ್ರೀ, ಪುರುಷೋತ್ತಮಾನಂದಪುರಿ ಶ್ರೀ, ಶ್ರೀಕೃಷ್ಣ ಯಾದವಾನಂದ ಶ್ರೀ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಸಮಿತಿಯ ಅಧ್ಯಕ್ಷ ನಯನ್, ಮಾರ್ಗದರ್ಶಕ ಬದರಿನಾಥ್, ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶರಣ್‌ಕುಮಾರ್, ಬಿಜೆಪಿ ಮುಖಂಡ ಜಿ.ಎಸ್‌.ಅನಿತ್‌ಕುಮಾರ್‌ ಅರ್ಚಕರ ಮಾರ್ಗದರ್ಶನದಂತೆ ಪೂರ್ಣಾಹುತಿ ನಡೆಸಿಕೊಟ್ಟರು. ನಂತರ ಜೈ ಶ್ರೀರಾಮ ಬಳಗದಿಂದ ಸಂಜೆ 6ರವರೆಗೂ ನಡೆದ ಅನ್ನಸಂತರ್ಪಣೆ ಕಾರ್ಯದಲ್ಲೂ ಅನೇಕ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ವಿಎಚ್‌ಪಿ ಜಿಲ್ಲಾಧ್ಯಕ್ಷ ಷಡಕ್ಷರಪ್ಪ, ವಿಎಚ್‌ಪಿ, ಬಜರಂಗದಳದ ಮುಖಂಡರಾದ ಸಂದೀಪ್, ರೋಹಿತ್, ಅಶೋಕ್, ಭಾನು ಸೇರಿ ಸಮಿತಿಯ ಅನೇಕ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net