

ನವೀನ್ ಚಂದ್ರ ಶೆಟ್ಟಿ ಆನೇಕಲ್
ಗರ್ಭಿಣಿ ಹೊಟ್ಟೆಯಲ್ಲಿ ಮಗುವಿನ ಜತೆಗೆ ಭಾರಿ ಗಾತ್ರದ ಗಡ್ಡೆಗಳು ಬೆಳೆದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ತಾಯಿ ಹಾಗೂ ಮಗುವನ್ನು ಐವರು ವೈದ್ಯರು ಸತತ 2 ತಾಸು ಶಸಚಿಕಿತ್ಸೆ ನಡೆಸಿ ಬದುಕಿಸಿದ್ದಾರೆ.
ಚಂದಾಪುರದ ಅತ್ರೇಯ ಆಸ್ಪತ್ರೆ ವೈದ್ಯರು ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಿ ತಾಯಿ ಹಾಗೂ ಮಗುವಿಗೆ ಪುನರ್ಜನ್ಮ ನೀಡಿದ್ದಾರೆ. 34 ವರ್ಷದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ಸ್ಕಾೃನಿಂಗ್ ವರದಿಯಲ್ಲಿ ದೊಡ್ಡ ಗಡ್ಡೆಗಳಿರುವುದು ಕಾಣಿಸಿಕೊಂಡಿತ್ತು. ಈ ಕುರಿತು ವೈದ್ಯರಾದ ಡಾ.ವಿನುತ, ಡಾ.ಗುರುಪ್ರಸಾದ್, ಡಾ.ಅಕ್ಷಯ್, ಡಾ.ನಾರಾಯಣಸ್ವಾಮಿ, ಡಾ.ದೀಕ್ಷಾ ಅವರು ಚರ್ಚೆ ನಡೆಸಿ ಶಸಚಿಕಿತ್ಸೆ ನಡೆಸಿ ಒಂದೂವರೆ ಕೆಜಿಯಷ್ಟಿದ್ದ ಗಡ್ಡೆಗಳನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸತತ 9 ತಿಂಗಳು ಪರೀಕ್ಷೆ: ಮಹಿಳೆ ಗರ್ಭ ಧರಿಸಿದಾಗಲೆ ಹೊಟ್ಟೆಯಲ್ಲಿ ಗಡ್ಡೆಗಳಿರುವುದು ತಿಳಿದುಬಂದಿತ್ತು. ಡಾ.ವಿನುತ ಅವರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು 9 ತಿಂಗಳು ಚಿಕಿತ್ಸೆ ನೀಡುತ್ತಾ ಬಂದಿದ್ದರು. ಹೇಗಾದರೂ ಮಾಡಿ ತಾಯಿ ಹಾಗೂ ಮಗುವನ್ನು ಬದುಕಿಸಲು ಪ್ರಯತ್ನ ನಡೆಸಿದ್ದರು. ಈ ರೀತಿಯ ಪ್ರಕರಣಗಳು ಸಾವಿರಕ್ಕೆ ಒಂದು ಕಂಡು ಬರುತ್ತವೆ. ಸಾಮಾನ್ಯವಾಗಿ ಮಹಿಳೆಯರ ಗರ್ಭಕೋಶದ ಒಳ ಹಾಗೂ ಹೊರಭಾಗದಲ್ಲಿ ಸಣ್ಣ-ಸಣ್ಣ ಗಡ್ಡೆಗಳಿರುತ್ತವೆ. ಆದರೆ ಈ ಮಹಿಳೆಯ ಹೊಟ್ಟೆಯಲ್ಲಿ ಆರೇಳು ದೊಡ್ಡ ಗಡ್ಡೆಗಳು ಕಾಣಿಸಿಕೊಂಡಿದ್ದವು. ಈ ರೀತಿಯ ಸಂದರ್ಭದಲ್ಲಿ ಗರ್ಭಕೋಶದಲ್ಲಿ ಮಗುವಿಗೆ ಹೆಚ್ಚು ಒತ್ತಡವಾಗಿ ಗರ್ಭಪಾತ ಆಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ರಕ್ತಸ್ರಾವವಾಗಿ ತಾಯಿ, ಮಗು ಸಾವನ್ನಪ್ಪುವ ಸಾಧ್ಯತೆಗಳು ಹೆಚ್ಚು. ಇದನ್ನು ಈ ವೈದ್ಯರ ತಂಡ ಸವಾಲಾಗಿ ಸ್ವೀಕರಿಸಿತ್ತು. ವೈದ್ಯರ ಈ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಪರೇಷನ್ ಮುಗಿಯುವವರೆಗೂ ನಮಗೆ ಆತಂಕವಿತ್ತು. ತಾಯಿ, ಮಗು ಆರೋಗ್ಯವಾಗಿರುವುದನ್ನು ನೋಡಿ ಯುದ್ದ ಗೆದ್ದ ಅನುಭವವಾಯಿತು.
ಡಾ.ವಿನುತಾ ಆತ್ರೇಯ, ಆಸ್ಪತ್ರೆ ವೈದ್ಯರು
ವೈದ್ಯರಾದ ನಮಗೆ ಸವಾಲುಗಳು ಸಾಮಾನ್ಯ. ಆದರೆ ಅಪರೂಪದ ಇಂತಹ ಪ್ರಕರಣಗಳಲ್ಲಿ ಜೀವಗಳನ್ನು ಉಳಿಸಿದ ಸಂತಸ ಮರೆಯಲು ಸಾಧ್ಯವಿಲ್ಲ.
ಡಾ. ನಾರಾಯಣಸ್ವಾಮಿ ಮಕ್ಕಳ ತಜ್ಞರು
ನಾನು ಆಪರೇಷನ್ ಥಿಯೇಟರ್ ಒಳಗೆ ಹೋಗುವಾಗ ನಮ್ಮ ಕುಟುಂಬದವರ ಜತೆ ವೈದ್ಯರ ತಂಡ ದೀರ್ಘ ಸಮಾಲೋಚನೆ ಮಾಡಿತ್ತು. ನಾನೂ ಸಹ ಏನಾಗುತ್ತದೆಯೋ ಎಂಬ ಭಯದಲ್ಲಿದ್ದೆ. ನನ್ನನ್ನು ಹಾಗೂ ಮಗುವನ್ನು ಕಾಪಾಡಿದ ವೈದ್ಯರನ್ನು ಮರೆಯುವುದಿಲ್ಲ.
ಆಪರೇಷನ್‌ಗೆ ಒಳಗಾದ ಮಹಿಳೆ.