ಗಡಿಯಾರ ಗೋಪುರದ ಮೇಲೆ ಹಾರಿತು ತಿರಂಗಾ : ಮುಸ್ಲಿಂ ಮುಖಂಡರೊಂದಿಗೆ ಧ್ವಜ ಹಾರಿಸಿದ ಜಿಲ್ಲಾಡಳಿತ, ಡಿಸಿ, ಎಸ್ಪಿ ಕಾರ್ಯಕ್ಕೆ ಮೆಚ್ಚುಗೆ

1
Published on

ಕೋಲಾರ: ಗಡಿಯಾರ ಗೋಪುರದ ಮೇಲೆ ಶನಿವಾರ ಜಿಲ್ಲಾಡಳಿತ ತ್ರಿವರ್ಣ ಧ್ವಜ ಹಾರಿಸಿದೆ. ಇದರೊಂದಿಗೆ 3 ದಿನಗಳಿಂದ ಎದುರಾಗಿದ್ದ ಆತಂಕದ ಪರಿಸ್ಥಿತಿ ತಿಳಿಯಾಗಿದೆ.

ಸಂಸದ ಎಸ್​.ಮುನಿಸ್ವಾಮಿ ಧರಣಿ ಎಚ್ಚರಿಕೆ ನೀಡಿದ್ದರಿಂದ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ವೆಂಕಟ್​ರಾಜಾ ಮತ್ತು ಪೊಲೀಸ್​ ವರಿಷ್ಠಾಧಿಕಾರಿ ಡಿ.ದೇವರಾಜ್​, ನಗರಸಭೆ ಆಯುಕ್ತ ಪ್ರಸಾದ್​ ಶುಕ್ರವಾರ ಸಂಜೆ ಟವರ್​ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಮುಸ್ಲಿಂ ಮುಖಂಡರೊಂದಿಗೆ ಚರ್ಚಿಸಿ, ರಾತ್ರಿಯಿಡೀ ನಿಗಾವಹಿಸಿ ಶನಿವಾರ ಬೆಳ್ಳಂಬೆಳಗ್ಗೆ ಬಣ್ಣ ಬಳಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಮಧ್ಯಾಹ್ನ 2.40ಕ್ಕೆ ಕ್ರೇನ್​ನಲ್ಲಿ ಜಿಲ್ಲಾಧಿಕಾರಿ ವೆಂಕಟ್​ರಾಜಾ, ಎಸ್ಪಿ ಡಿ.ದೇವರಾಜ್​ ಮತ್ತು ಮತ್ತೊಂದು ಕ್ರೇನ್​ನಲ್ಲಿ ಅಂಜುಮಾನ್​ ಇಸ್ಲಾಮಿಯಾ ಮುಖ್ಯಸ್ಥ ಜಮೀರ್​ ಅಹ್ಮದ್​ ಮತ್ತಿತರರು ಟವರ್​ ಮೇಲೆ ತ್ರಿವರ್ಣ ಧ್ವಜ ಹಾರಿಸಿದರು.

ಈ ಸಂದರ್ಭ ರಾಷ್ಟ್ರಗೀತೆ ಮೊಳಗಿದ್ದು, ಸ್ಥಳದಲ್ಲಿ ನೆರೆದಿದ್ದ ಎಲ್ಲರೂ ಗೌರವ ಸೂಚಿಸಿದರು. ನೂರಾರು ಮುಸ್ಲಿಮರು ಹಿಂದುಸ್ಥಾನ್​ ಹಮಾರಾ ಹೇ, ಭಾರತ ಮಾತೆಗೆ ಜೈ ಎಂಬ ಜೈಕಾರ ಕೂಗಿದರು. ನಗರದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನವಾಗಿ ಉಳಿದುಕೊಳ್ಳುವಂತಾಯಿತು.

ಮುಸ್ಲಿಂ ಯುವಕರ ಅಸಮಾಧಾನ: ಬೆಳಗ್ಗೆಯಿಂದ ಅಂಜುಮಾನ್​ ಇಸ್ಲಾಮಿಯಾ ಮುಖಂಡರೊಂದಿಗೆ ಡಿಸಿ ಮತ್ತು ಎಸ್ಪಿ ಸ್ಥಳದಲ್ಲೇ ಉಳಿದುಕೊಂಡಿದ್ದರು. ಕ್ಲಾಕ್​ ಟವರ್​ಗೆ ಸಂಪರ್ಕ ಕಲ್ಪಿಸುವ ಬೆಂಗಳೂರು ಕಡೆಯಿಂದ ಬರುವ ಮಾರ್ಗ, ಹೊಸ ಬಸ್​ ನಿಲ್ದಾಣ ಮತ್ತು ದೊಡ್ಡಪೇಟೆ ಕಡೆ ಸಂಚರಿಸುವ ಮಾರ್ಗ ಹಾಗೂ ಟೇಕಲ್​, ಬಂಗಾರಪೇಟೆ ಹೋಗುವ ಮಾರ್ಗಗಳಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿ ಹೊರಗಿನಿಂದ ಬರುವವರನ್ನು ತಡೆದು ಬೇರೆ ಮಾರ್ಗಗಳಲ್ಲಿ ಕಳುಹಿಸಿಕೊಡಲಾಗುತ್ತಿತ್ತು. ಬಣ್ಣ ಬಳಿಯುವವರು ಟವರ್​ ಮೇಲಿದ್ದ ಹಸಿರು ಧ್ವಜ ಮತ್ತು ಸ್ಟಾರ್​ ಇದ್ದ ಧ್ವಜಕಟ್ಟುವ ಪೈಪ್​ ತೆರವುಗೊಳಿಸಿದಾಗ 200 ಮೀಟರ್​ ದೂರದಲ್ಲಿ ಸಹಸ್ರಾರು ಮುಸ್ಲಿಂ ಯುವಕರು ಕಿರುಚಾಡತೊಡಗಿದರು. ಎಚ್ಚೆತ್ತುಕೊಂಡ ಪೊಲೀಸರು ಜನರನ್ನು ಚದುರಿಸಿದರು. ಮುಖಂಡರ ಮನವಿ ಮೇರೆಗೆ ಸ್ಟಾರ್​ ಚಿಹ್ನೆಯಿದ್ದ ಪೈಪನ್ನು ಹಾಗೇ ಬಿಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ನಂತರ ಪರಿಸ್ಥಿತಿ ತಿಳಿಯಾಯಿತು. ಇದೊಂದು ಘಟನೆ ಹೊರತುಪಡಿಸಿದರೆ ಮುಸ್ಲಿಂ ಮುಖಂಡರೇ ಶಾಂತ ರೀತಿಯಿಂದ ಇರಬೇಕೆಂದು ಎಲ್ಲರಿಗೆ ಹೇಳುತ್ತಿದ್ದುದು ಕಂಡುಬಂದಿತು. ಸ್ಥಳದಲ್ಲಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ಧರಣಿ ಎಚ್ಚರಿಕೆ ನೀಡಿದ್ದ ಸಂಸದ: ಸಾರ್ವಜನಿಕ ಸ್ಥಳದಲ್ಲಿರುವ ಗಡಿಯಾರ ಗೋಪುರದ ಮೇಲೆ ಧರ್ಮದ್ವಜ ಹಾರಾಡುತ್ತಿದ್ದುದು ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೇ ವಿಷಯವಾಗಿ ಸಂಸದ ಮುನಿಸ್ವಾಮಿ 3 ದಿನದ ಹಿಂದೆ ಧ್ವನಿ ಎತ್ತಿ, ರಾಷ್ಟ್ರ ಧ್ವಜ ಹಾರಿಸುವ ತನಕ ಧರಣಿ ನಡೆಸುವುದಾಗಿ ಹೇಳಿದ್ದರು. ಶುಕ್ರವಾರದಿಂದ ಧರಣಿ ನಡೆಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಪರಿಸ್ಥಿತಿ ಸೂಕ್ಷ$್ಮತೆ ಅರಿತಿದ್ದ ಎಸ್ಪಿ ಡಿ.ದೇವರಾಜ್​ ಧರಣಿಗೆ ಅವಕಾಶ ನೀಡದೆ, ಜಿಲ್ಲಾಧಿಕಾರಿ ಜತೆ ಚರ್ಚಿಸಿ 2 ದಿನದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಭರವಸೆ ನೀಡಿದ್ದರು. ಅದರಂತೆ ಜಿಲ್ಲಾಡಳಿತ ಟವರ್​ನ 74 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ರಾಷ್ಟ್ರಧ್ವಜ ಹಾರಾಡುವಂತೆ ಮಾಡಿದರು.

ಮಾ.28ರವರೆಗೆ ನಿಷೇಧಾಜ್ಞೆ: ಹೈಕೋರ್ಟ್​ನಲ್ಲಿ ಹಿಜಾಬ್​ ತೀರ್ಪು ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮಾ.21ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಟವರ್​ನಲ್ಲಿ ಧ್ವಜಾರೋಹಣ ನೆರವೇರಿದ ಹಿನ್ನೆಲೆಯಲ್ಲಿ ನಗರದಲ್ಲಿ ಮಾತ್ರ ಮಾ.28ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಲಿದ್ದಾರೆ ಎಂದು ಎಸ್ಪಿ ದೇವರಾಜ ಮಾಹಿತಿ ನೀಡಿದರು.

ಗಡಿಯಾರ ಗೋಪುರ ನಗರಸಭೆ ಆಸ್ತಿಯಾಗಿದ್ದು, ಅದಕ್ಕೆ ಸುಣ್ಣ ಬಣ್ಣ ಬಳಿದು ಧ್ವಜಾರೋಹಣ ಮಾಡಲಾಗಿದೆ. ಜಿಲ್ಲಾ ಪೊಲೀಸರು, ಮುಸ್ಲಿಂ ಮುಖಂಡರು ಸಹಕಾರ ನೀಡಿದ್ದಾರೆ. ನಗರದ ಜನರು ಶಾಂತಿ ಕಾಪಾಡಿದ್ದಕ್ಕಾಗಿ ಧನ್ಯವಾದ ತಿಳಿಸುತ್ತೇನೆ. ಮುಂದಿನ ದಿನಗಳಲ್ಲಿ ನಗರಸಭೆಯಿಂದ ಟವರ್​ ನಿರ್ವಹಣೆ ಮಾಡಲಾಗುವುದು. ರಾಷ್ಟ್ರೀಯ ಹಬ್ಬಗಳಂದು ನಗರಸಭೆಯಿಂದ ಧ್ವಜಾರೋಹಣ ನಡೆಯಲಿದೆ. ವೆಂಕಟ್​ರಾಜಾ, ಜಿಲ್ಲಾಧಿಕಾರಿ ಮುಸ್ಲಿಂ ಮುಖಂಡರಾದಿಯಾಗಿ ಎಲ್ಲರೂ ಸ್ವಯಂ ಪ್ರೇರಿತರಾಗಿ ಧ್ವಜ ಹಾರಿಸಲು ಸಹಕಾರ ನೀಡಿದ್ದಾರೆ. ನಗರದಲ್ಲಿ ಶಾಂತಿ ಕಾಪಾಡಿ ಕಾರ್ಯಕ್ರಮ ಸುಗಮವಾಗಿ ನಡೆಯಲು ಸಹಕರಿಸಿದ ಜನತೆಗೆ ಧನ್ಯವಾದಗಳು. ಮುಂದೆ ರಾಷ್ಟ್ರೀಯ ಹಬ್ಬಗಳಂದು ತ್ರಿವರ್ಣ ಧ್ವಜ ಹಾರಿಸಲು ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಡಿ.ದೇವರಾಜ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net