

ಬೆಳಗಾವಿ: ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಕರೊನಾ 3ನೇ ಅಲೆ ಹೆಚ್ಚಿರುವ ಹಿನ್ನೆಲೆಯಲ್ಲಿ ಗಡಿ ಪ್ರದೇಶಗಳಲ್ಲಿ ಇನ್ನಷ್ಟು ಬಿಗಿ ಕ್ರಮ ಜರುಗಿಸಿ, ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೆಳಗಾವಿ ವರ್ತಕರ ಸಂಘದಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು. ಮಹಾರಾಷ್ಟ್ರದಲ್ಲಿ ಕೋವಿಡ್ 3ನೇ ಅಲೆ ಅಬ್ಬರ ಹೆಚ್ಚಿದೆ. ಜತೆಗೆ ಗಡಿ ಭಾಗಗಳಲ್ಲಿ ರಾಜ್ಯಕ್ಕೆ ಪ್ರವೇಶಿಸುತ್ತಿರುವವರ ಸಂಖ್ಯೆ ಏರಿಕೆಯಾಗಿದೆ. ಸೋಂಕು ತಡೆಗೆ ಗಡಿ ಭಾಗದಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು. ಈಗಾಗಲೇ ಎರಡು ಅಲೆಗಳ ವೇಳೆ ಬಹಳ ನಷ್ಟ ಅನುಭವಿಸಿರುವ ಬೆಳಗಾವಿ ಜಿಲ್ಲೆ ಹಾಗೂ ರಾಜ್ಯದ ಜನರು ಮೂರನೇ ಅಲೆ ಹೊಡೆತ ತಡೆದುಕೊಳ್ಳುವ ಶಕ್ತಿ ಹೊಂದಿಲ್ಲ. ಸರ್ಕಾರ ಗಡಿಭಾಗದಲ್ಲಿ ಇನ್ನಷ್ಟು ಕಠಿಣ ನಿಯಮ ಜಾರಿಗೊಳಿಸುವ ಮೂಲಕ ಜನ ಸಂಚಾರ ತಡೆಯಬೇಕು. 1 ಮತ್ತು 2ನೇ ಅಲೆಯಲ್ಲಿ ಲಾಕ್‌ಡೌನ್‌ನಿಂದ ತತ್ತರಿಸಿರುವ ವರ್ತಕರು ಮತ್ತು ಜನಸಾಮಾನ್ಯರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಬೆಳಗಾವಿ ವರ್ತಕರ ಸಂಘದ ಮುಖಂಡ ಸತೀಶ ತೆಂಡೂಲ್ಕರ್, ಶೇವಂತಿಲಾಲ್ ಶಾಹ, ವಿಕಾಸ ಕಲಘಟಗಿ, ರೋಜು ಖೋಡಾ, ಅರುಣ ಕುಲಕರ್ಣಿ, ವಿಶಾಲ ಕುಲಕರ್ಣಿ, ದೀಪಕ ಎ., ರಮೇಶ ಪಾವಲೆ ಇತರರು ಇದ್ದರು.