ಗಡಿಭಾಗದ ಶಾಲೆಗಳಿಗೆ ನಿರ್ಲಕ್ಷವೇ ಭಾರ!

web6
ಅನಂತಪುರ ತೋಟದ ಕನ್ನಡ ಶಾಲೆಯ ಶಿಥಿಲ ಕೊಠಡಿ
Published on

ಸಂಬರಗಿ: ಗಡಿಭಾಗದಲ್ಲಿ ಕನ್ನಡ ಉಳಿಸಲು, ಬೆಳೆಸಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಅದರಲ್ಲೂ ಕನ್ನಡ ಶಾಲೆಗಳನ್ನು ಉಳಿಸಲು ಹಲವು ಯೋಜನೆ ಹಾಕಿಕೊಂಡು ಅನುಷ್ಠಾನಗೊಳಿಸಿದೆ. ಕನ್ನಡತನ ಕಟ್ಟಲು ಊರುಗೋಲಾಗಿರುವ ಶಾಲೆಗಳು ನಿರ್ಲಕ್ಷಕ್ಕೆ ಒಳಗಾಗಿದ್ದು, ಗಡಿಭಾಗದ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಕನ್ನಡ ಪ್ರಾಥಮಿಕ ಶಾಲೆಗಳು ಶತಮಾನೋತ್ಸವದ ಅಂಚಿಗೆ ಬಂದರೂ ಮೂಲಸೌಕರ್ಯಗಳ ಕೊರತೆಯಿಂದ ಮುಕ್ತವಾಗಿಲ್ಲ. ಶಿಕ್ಷಕರ ಕೊರತೆ ಮತ್ತು ಕೊಠಡಿಗಳ ಕೊರತೆ ಸೇರಿ ವಿವಿಧ ಸಮಸ್ಯೆಗಳಿಂದ ಶಾಲೆಗಳು ಬೀಗ ಹಾಕಲ್ಪಡುತ್ತಿವೆ. ಅನಂತಪುರ ತೋಟದ ಶಾಲೆ 72 ವರ್ಷ ಪೂರೈಸಿದೆ. ಪ್ರತಿ ತರಗತಿಗೆ ಒಬ್ಬ ಶಿಕ್ಷಕರು ಮತ್ತು ಒಂದು ಕೊಠಡಿ ಅವಶ್ಯವಿದೆ. ಆದರೆ, ಶಾಲೆಯಲ್ಲಿ 4 ಕೊಠಡಿಗಳಲ್ಲೇ 7 ತರಗತಿ ನಡೆಯುತ್ತಿದ್ದು, ಅವುಗಳಲ್ಲಿ 2 ಕೋಣೆ ಶಿಥಿಲಗೊಂಡಿವೆ. ಒಬ್ಬ ಶಿಕ್ಷಕ ಮಾತ್ರ ಇದ್ದಾರೆ.
1925ರಲ್ಲಿ ಅನಂತಪುರ ಗ್ರಾಮದ ತೋಟದ ಶಾಲೆ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಗೊಂಡಿದೆ. ಆಗಲೇ ಮಕ್ಕಳ ಸಂಖ್ಯೆ 100 ಇತ್ತು. ಬರಬರುತ್ತ ಮಕ್ಕಳ ಸಂಖ್ಯೆಯೂ ಕ್ಷೀಣಿಸಿ ಮೂಲಸೌಕರ್ಯಗಳ ಕೊರತೆಯೂ ಹೆಚ್ಚುತ್ತಿದೆ. ರಾಜ್ಯ ಸರ್ಕಾರ ವಿಶೇಷ ತಂಡ ರಚಿಸಿ ಗಡಿಭಾಗದ ಕನ್ನಡ ಶಾಲೆಗಳ ಸಮಸ್ಯೆ ಪರಿಶೀಲನೆ ಮಾಡಿ ಯೋಗ್ಯ ನಿರ್ಣಯ ತೆಗೆದುಕೊಂಡರೆ ಮಾತ್ರ ಗಡಿಭಾಗದ ಕನ್ನಡ ಶಾಲೆಗಳು ಉಳಿಯಲು ಸಾಧ್ಯವಿದೆ. ಕೇಂದ್ರ ಶಾಲೆ ಅನಂತಪೂರ, ಖಿಳೇಗಾಂವ, ಜಂಬಗಿ, ಅರಳಿಹಟ್ಟಿ, ತಾವಂಶಿ ಹಾಗೂ ಇನ್ನೂ ಹಲವಾರು ಗಡಿಭಾಗದ ಕನ್ನಡ ಶಾಲೆಗಳು ಶತಮಾನೋತ್ಸವದ ಅಂಚಿನಲ್ಲಿವೆ. ಅವುಗಳ ಪುನಶ್ಚೇನಕ್ಕೆ ರಾಜ್ಯ ಸರ್ಕಾರ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಯಾವ ಶಾಲೆ ಶತಮಾನ ಪೂರೈಸಿದೆ, ಯಾವ ಶಾಲೆಗಳು ಶತಮಾನೋತ್ಸವದ ಅಂಚಿನಲ್ಲಿವೆ, ಅವುಗಳ ಸ್ಥಿತಿಗತಿ ಏನು ಎಂಬ ಮಾಹಿತಿಯೇ ಜಿಲ್ಲಾಡಳಿತಕ್ಕಿಲ್ಲ ಎನ್ನುವುದು ಬೇಸರದ ಸಂಗತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net