

ಸೋಮವಾರಪೇಟೆ: ಹಿಂದು ಕಾರ್ಯಕರ್ತರ ಗಡಿಪಾರಿಗೆ ಜಿಲ್ಲಾಡಳಿತ ನೀಡಿರುವ ನೋಟಿಸ್ ಅನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಮತ್ತು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರಾದ ಕವನ್ ಕಾವೇರಪ್ಪ ಹಾಗೂ ವಿನಯ್ ಅವರನ್ನು ಗಡಿಪಾರು ಮಾಡುವ ಕುರಿತು ನೀಡಿರುವ ನೋಟಿಸ್ ಅನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ತಾಲೂಕು ಸಂಚಾಲಕ ಬೋಜೇಗೌಡ ಮಾತನಾಡಿ, ಹಿಂದು ಸಂಘಟನೆಗಳ ಕಾರ್ಯಕರ್ತರನ್ನು ದಮನ ಮಾಡುವ ಕ್ರಮಕ್ಕೆ ಆಡಳಿತ ವ್ಯವಸ್ಥೆ ಮುಂದಾಗಿರುವುದು ವಿಪರ್ಯಾಸ. ಗಡಿಪಾರಿಗೆ ಕಾರಣ ಕೇಳಿ ನೀಡಿರುವ ನೋಟಿಸ್ ಅನ್ನು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ, ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಹುಲ್ಲೂರಿಕೊಪ್ಪ ಚಂದ್ರು, ಹಿಂದು ಜಾಗರಣಾ ವೆದಿಕೆ ಜಿಲ್ಲಾ ಘಟಕದ ಪ್ರಮುಖರಾದ ಸುಭಾಶ್ ತಿಮ್ಮಯ್ಯ, ಎಂ.ಬಿ.ಉಮೇಶ್, ಸುನಿಲ್ ಮಾದಪ್ಪ, ತಾಲೂಕು ಪ್ರಮುಖರಾದ ಬಿ.ಜೆ.ದೀಪಕ್ ಎಚ್.ಕೆ.ಮಾದಪ್ಪ, ಕೆ.ಜಿ.ಸುರೇಶ್, ರೂಪ ಸತೀಶ್, ವಿನು, ಗಿರೀಶ್ ಇದ್ದರು.