

ಹುಬ್ಬಳ್ಳಿ : ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವರು ಕರೆದಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆಯಲ್ಲಿ ರಾಜ್ಯದ ಆಡಳಿತಾತ್ಮಕ, ಕಾನೂನಾತ್ಮಕ ಹಾಗೂ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂದು ಸಂಜೆ ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲ ವಿಷಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಗಮನಕ್ಕೆ ತರಲಾಗುವುದು. ಯಾವುದೇ ರೀತಿಯಿಂದಲೂ ಹಿಂದೆ ಸರಿಯುವುದಿಲ್ಲ ಎಂದರು.
ಗಡಿ ವಿಷಯ ಸುಪ್ರಿಂ ಕೋರ್ಟ್ನಲ್ಲಿದೆ. ಹೀಗಿರುವಾಗ ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಕರ್ನಾಟಕದ ವಕೀಲರು ಸಮರ್ಪಕ ವಾದ ಮಂಡಿಸಲಿದ್ದಾರೆ ಎಂದು ತಿಳಿಸಿದರು.
ನಾನು ನೀರಾವರಿ ಸಚಿವನಾಗಿದ್ದಾಗ ಮಹದಾಯಿ ನೀರಿಗಾಗಿ ಐದೂವರೆ ಕಿಮೀ ಉದ್ದ ಕೆನಾಲ್ ನಿರ್ವಿುಸುವ ಕಾಮಗಾರಿ ನಡೆದಿತ್ತು. ಆದರೆ, ಸೋನಿಯಾ ಗಾಂಧಿಯವರು ಮಹದಾಯಿಯ ಒಂದು ಹನಿ ನೀರನ್ನು ಬಿಡದಂತೆ ಗೋವಾದಲ್ಲಿ ಹೇಳಿಕೆ ನೀಡಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆನಾಲ್ಗೆ ಅಡ್ಡವಾಗಿ ಗೋಡೆ ಕಟ್ಟಲಾಯಿತು. ಕಾಂಗ್ರೆಸ್ನವರಿಗೆ ಮಹದಾಯಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ. ಆ ಪಕ್ಷದ ಮುಖಂಡರು ಬರಲಿ, ಸೂಕ್ತ ಉತ್ತರ ಕೊಡುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ 437 ನಮ್ಮ ಕ್ಲಿನಿಕ್ ಪ್ರಾರಂಭಿಸಲು ತೀರ್ವನಿಸಲಾಗಿದ್ದು, ಇಂದು ಮೊದಲ ಹಂತವಾಗಿ 100 ಕ್ಲಿನಿಕ್ಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.