ಗಡಿ ಭಾಗದಲ್ಲಿ ಮೊಳಗಲಿ ಕನ್ನಡದ ಕಹಳೆ

SAHABAVANA
Published on

ಯಾದಗಿರಿ: ಇಂದಿನ ಯುವ ಜನಾಂಗ ಪ್ರಾದೇಶಿಕ ಆಸ್ಮಿತೆಯನ್ನು ಉಳಿಸಿಕೊಂಡು ಮಾತೃ ಭಾಷೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಅಗತ್ಯವಿದೆ ಎಂದು ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ಹೇಳಿದರು.

ಇಲ್ಲಿನ ಜಿಲ್ಲಾ ಕಸಾಪ ಭವನದಲ್ಲಿ ತಾಲೂಕಿನ ಕಿಲ್ಲನಕೇರಾದ ಸಹಭಾವನ, ಸಮನ್ವಯ ಸೇವಾಸಂಸ್ಥೆ ಉದ್ಘಾಟನೆ ಹಾಗೂ ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾದಗಿರಿ ಗಡಿಗೆ ಅಂಟಿರುವ ಜಿಲ್ಲೆ. ಇಲ್ಲಿ ಕನ್ನಡಪರ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸುವ ಮೂಲಕ ಕನ್ನಡದ ಕಹಳೆ ನಿರಂತರವಾಗಿ ಮೊಳಗಿಸುವ ಅಗತ್ಯವಿದೆ ಎಂದರು.

ಈಗಾಗಲೇ ಜಿಲ್ಲಾ ಕಸಾಪದಿಂದ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಯುವಕರು ಸಹ ನಾಡಿನ ನೆಲ, ಜಲ ಮತ್ತು ಭಾಷೆಯ ಬಗ್ಗೆ ಹೆಚ್ಚಿನ ಪ್ರೀತಿ ಹೊಂದಬೇಕಿದೆ. ಸಮಾಜದಲ್ಲಿ ಯುವಪಡೆ ಇಂಥ ಸೇವಾ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಸಮಾಜ ಸೇವೆಗೆ ಅಣಿಯಾಗಲಿ.

ಕಸಾಪ ಜಿಲ್ಲಾಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ ಮಾತನಾಡಿ, ಸಾಹಿತ್ಯ ಯಾವತ್ತಿಗೂ ರಾಜಾಶ್ರಯದಲ್ಲೇ ಬೆಳೆಯುತ್ತದೆ. ಹಿಂದೆ ರಾಜರು ಸಾಹಿತ್ಯ ಪ್ರೇಮಿಗಳಾಗಿದ್ದರು. ಇದೀಗ ರಾಜಕಾರಣಿಗಳು ಪರಿಷತ್ತಿನ ಚಟುವಟಿಕೆಗಳಿಗೆ ಹೆಚ್ಚು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹಿರಿಯ ಸಾಹಿತಿ ಸಿದ್ರಾಮ್ ಹೊನ್ಕಲ್ ಮಾತನಾಡಿ, ಕವಿ,ಲೇಖಕ ತಾನಿರುವ ಕಾಲಮಾನದ ಸಾಕ್ಷಿ ಪ್ರಜ್ಞೆಯಾಗಿದ್ದಾನೆ. ಆ ಕಾರಣ ಆತ ಸಮಾಜಮುಖಿಯಾಗಿ, ಜನಮುಖಿಯಾಗಿ ಬರೆಯಬೇಕು. ಸರ್ವ ಜನಾಂಗದ ಸೌಹಾರ್ದತೆಯ, ಸಮಾನತೆಯ ಆಶಯ ಕವಿಯದ್ದಾಗಿರಬೇಕು. ಸಮಾಜದ ಸ್ವಾಸ್ಥ್ಯಕ್ಕೆ ಅವರು ಬರಹದ ಮೂಲ ಆಶಯವಾಗಿರಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net