

ಔರಾದ್: ಶಿಕ್ಷಕರು ಗಡಿ ಭಾಗದ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಶಾಲೆಗೆ ಕೀರ್ತಿ ತರಬೇಕು. ಎಲ್ಲಡೆ ಶಾಲೆಯನ್ನು ಬೆಳಕಿಗೆ ತರುವಲ್ಲಿ ಶ್ರಮಿಸಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.
ನಾಗಮಾರಪಳ್ಳಿ ಸರ್ಕಾರಿ ಶಾಲೆಯಲ್ಲಿ ಪ್ರಾಧಿಕಾರದ ಅನುದಾನದಿಂದ ಅಳವಡಿಸಲಾದ ಸ್ಮಾರ್ಟ್ ಬೋರ್ಡ್ಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ನಾಡಿನ ಗಡಿ ಭಾಗದಲ್ಲಿನ ಕನ್ನಡ ಶಾಲೆಗಳ ಅಭಿವೃದ್ಧಿಯೇ ಪ್ರಾಧಿಕಾರದ ಮುಖ್ಯ ಗುರಿಯಾಗಿದೆ ಎಂದರು.
ರಾಜ್ಯ ಸರ್ಕಾರ ಸ್ವಾಧೀನದ ಸ್ವತಂತ್ರ ಸಂಸ್ಥೆಯಾದ ಈ ಪ್ರಾಧಿಕಾರವು ೨೦೧೦ ರಲ್ಲಿ ಹುಟ್ಟಿಕೊಂಡಿದ್ದು, ರಾಜ್ಯದ ೧೯ ಜಿಲ್ಲೆಯ ಗಡಿ ಕನ್ನಡ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸಿ ಕೊಡುವಲ್ಲಿ ಹಿಂದಿನ ಅಧ್ಯಕ್ಷರುಗಳು ಶ್ರಮಿಸಿದ್ದಾರೆ. ನಾನು ಸಹ ಮೂಲ ಸೌಕರ್ಯಗಳನ್ನು ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಗಡಿ ಕನ್ನಡ ಶಾಲೆಗಳ ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ಹೊಸ ಕಾನೂನು ಕೂಡ ತರಲಾಗಿದೆ ಎಂದು ತಿಳಿಸಿದರು.
ಪ್ರಾಧಿಕಾರದಿಂದ ಈ ಭಾಗದ ಪ್ರತಿಭಾವಂತರಿಗೆ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಹಾಗೂ ಜಯದೇವಿ ಲೀಗಾಡೆ ಪ್ರಶಸ್ತಿ ನೀಡುವ ಯೋಜನೆ ಹಾಕಿಕೊಂಡಿದ್ದು, ಗೋವಾದಲ್ಲಿನ ೬ ಲಕ್ಷ ಕನ್ನಡಿಗರ ಅನುಕೂಲಕ್ಕೆ ಕನ್ನಡ ಭವನ ನಿರ್ಮಾಣಕ್ಕೆ ಮುಂದಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಸಿದ್ರಾಮ ಶಿಂಧೆ, ಗಡಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ.ಅಮರವಾಡಿ, ಶಾಲೆಯ ಅಧ್ಯಕ್ಷ ಪ್ರಕಾಶ ಹೆಬ್ಬಾಳೆ, ಪಿಡಿಒ ಶರಣಪ್ಪ ನಾಗಲಗಿದ್ದೆ, ಮಹಾನಂದಾ ಎಂಡೆ, ನಾಗನ್ನಾಥ ಸುರಂಗೆ, ಅನಿಲರೆಡ್ಡಿ, ಶಿವಕಾಂತಾ, ಗುರು ಪಾಟೀಲ್, ಝರೆಪ್ಪ ನಾಗಮಾರಪಳ್ಳಿ, ಮುಖ್ಯಶಿಕ್ಷಕ ತುಳಸಿರಾವ ಬೇಂದ್ರೆ, ಅಕ್ಕಮಹಾದೇವಿ ಇತರರಿದ್ದರು. ವಿದ್ಯಾರ್ಥಿನಿ ಕಾವೇರಿ ಸ್ವಾಗತ ಗೀತೆ ಹಾಡಿದರು. ಈಶ್ವರ ಕ್ಯಾದೆ ಸ್ವಾಗತಿಸಿದರು. ಮಹಾನಂದ ನಿರೂಪಣೆ ಮಾಡಿದರು.