

ಧಾರವಾಡ: ಲಾಕ್ಡೌನ್ ಸಂದರ್ಭದಲ್ಲಿ ಹೊರ ರಾಜ್ಯಗಳಲ್ಲಿ ಸ್ಥಗಿತವಾಗಿರುವ ಜನರು ತವರು ರಾಜ್ಯಗಳಿಗೆ ತೆರಳಲು ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ನಗರದ ಕೃಷಿ ವಿಶ್ವ ವಿದ್ಯಾಲಯ ಆವರಣದಲ್ಲಿ ಮೇ 7ರಿಂದ ಆಗಮನ ಕೇಂದ್ರ ಸಹ ಪ್ರಾರಂಭಿಸಲಾಗಿದೆ. ಸೋಮವಾರದವರೆಗೆ ಒಟ್ಟು 8 ರಾಜ್ಯಗಳಿಂದ 324 ಜನರು ಆಗಮಿಸಿದ್ದಾರೆ.
ಹೊರ ರಾಜ್ಯಗಳಿಂದ ಆಗಮಿಸಿದ ಜನರಿಂದಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರೊನಾ ಪ್ರಕರಣಗಳು ಹೆಚ್ಚಳವಾಗಿ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದೇ ಕಾರಣದಿಂದ ಅವರ ಸಮಗ್ರ ಮಾಹಿತಿ ಕಲೆ ಹಾಕಿ, ಆರೋಗ್ಯ ತಪಾಸಣೆ ನಡೆಸಿದ ಬಳಿಕ ಅವರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ. ಈಗಾಲೇ ಜಿಲ್ಲೆಗೆ ಆಗಮಿಸಿದ 324 ಜನರ ಪೈಕಿ 127 ಜನರಿಗೆ ಹೋಂ ಕ್ವಾರಂಟೈನ್ ಹಾಗೂ 197 ಜನರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಹೊರ ರಾಜ್ಯಗಳಿಂದ ಆಗಮಿಸುವ ಜನರು ಸೇವಾಸಿಂಧು ಪೋರ್ಟಲ್ನಲ್ಲಿ ನೋಂದಣಿ ಮಾಡಿಸಿಕೊಂಡು ರಾಜ್ಯಕ್ಕೆ ಆಗಮಿಸುವಂತೆ ಸೂಚಿಸಲಾಗಿತ್ತು. ಪ್ರಾರಂಭದಲ್ಲಿ ಚೆಕ್ಪೋಸ್ಟ್ ಹಾಗೂ ಆಗಮನ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಅವರ ಕೈಗೆ ಅಳಿಸಲಾಗದ ಶಾಯಿಯಿಂದ ಮೊಹರು ಹಾಕಿ ಹೋಂ ಕ್ವಾರಂಟೈನ್ಗೆ ಒಳಪಡಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಹೊರ ರಾಜ್ಯಗಳಿಂದ ಆಗಮಿಸುವ ಜನರಲ್ಲಿ ಸೋಂಕು ಪತ್ತೆಯಾಗುತ್ತಿರುವ ಕಾರಣಕ್ಕೆ ಕಡ್ಡಾಯವಾಗಿ 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲು ಸೂಚನೆ ನೀಡಲಾಯಿತು.
ಇದೀಗ ಸಾಂಸ್ಥಿಕ ಕ್ವಾರಂಟೈನ್ ಮಾತ್ರವಲ್ಲದೆ, ಪ್ರತಿಯೊಬ್ಬರ ಗಂಟಲ ದ್ರವ ಮಾದರಿ ಪರೀಕ್ಷೆ ನಡೆಸಬೇಕು. 14 ದಿನಗಳ ಬಳಿಕವೇ ಮನೆಗಳಿಗೆ ಕಳುಹಿಸಬೇಕು ಎಂದು ಸೂಚನೆ ಹೊರಡಿಸಲಾಗಿದೆ.
ಕೃಷಿ ವಿವಿ ಆಗಮನ ಕೇಂದ್ರದಲ್ಲಿ ಡಿಡಿಪಿಐ, ನೋಡಲ್ ಅಧಿಕಾರಿ ಮೋಹನ ಹಂಚಾಟೆ ಅವರ ನೇತೃತ್ವದಲ್ಲಿ ವೈದ್ಯರು, ಇತರ ಇಲಾಖೆ ಸಿಬ್ಬಂದಿ ಸೇರಿ ಸುಮಾರು 5 ತಂಡಗಳಲ್ಲಿ 25ಕ್ಕೂ ಹೆಚ್ಚು ಜನ ಸಿಬ್ಬಂದಿ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರದಲ್ಲಿ 6 ಕೌಂಟರ್ ಸ್ಥಾಪಿಸಿ ಜನರ ಸಮಗ್ರ ಮಾಹಿತಿ ಸಂಗ್ರಹಣೆ, ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ಸಾಂಸ್ಥಿಕ ಕ್ವಾರಂಟೈನ್ಗೆ ಕೆಲವರು ವಿರೋಧಿಸಿದ್ದರು. ಅಂತಹವರಿಗೆ ಹೋಟೆಲ್ಗಳಲ್ಲಿ ವ್ಯವಸ್ಥೆ ಕಲ್ಪಿಸಿ, ಊಟ, ಉಪಾಹಾರ ಸೇರಿ ಸಂಪೂರ್ಣ ವೆಚ್ಚವನ್ನು ಅವರೇ ಭರಿಸುವಂತೆ ಸೂಚಿಸಲಾಗಿದೆ. ಸರ್ಕಾರದ ಈ ನಡೆಯಿಂದ ಬೇಸತ್ತ ಕೆಲವರು ಸರ್ಕಾರ, ಜಿಲ್ಲಾಡಳಿತದ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡುವವರಿಗೆ ಜಿಲ್ಲಾಡಳಿತದಿಂದ ಎಲ್ಲ ವ್ಯವಸ್ಥೆ ಮಾಡಲಾಗಿದೆ.
ಸೋಮವಾರ ಮಧ್ಯಾಹ್ನ 12 ಗಂಟೆವರೆಗಿನ ಮಾಹಿತಿ ಪ್ರಕಾರ ಗೋವಾದಿಂದ 73 ಜನ, ಗುಜರಾತ್ 44, ತೆಲಂಗಾಣ 33, ತಮಿಳುನಾಡು 43, ರಾಜಸ್ಥಾನ 13, ಮಹಾರಾಷ್ಟ್ರ 109, ಕೇರಳ 2 ಹಾಗೂ ಆಂಧ್ರಪ್ರದೇಶದಿಂದ 7 ಜನರು ಆಗಮಿಸಿದ್ದಾರೆ.
ಹೊರ ರಾಜ್ಯಗಳಿಂದ ಆಗಮಿಸುವ ಜನರು ಕಡ್ಡಾಯವಾಗಿ ಸೇವಾಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ. ಆದರೆ ಈ ಪೋರ್ಟಲ್ನಲ್ಲಿ ನೋಂದಣಿ ಮಾಡಿದರೆ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸುತ್ತಾರೆ ಎಂಬ ಕಾರಣಕ್ಕೆ ಅನೇಕ ಜನರು ಅಡ್ಡ ಹಾದಿ ಮೂಲಕ ರಾಜ್ಯಗಳಿಗೆ ಪ್ರವೇಶ ಮಾಡಿ, ತಮ್ಮ ಮನೆಗಳಿಗೆ ತಲುಪುತ್ತಿದ್ದಾರೆ. ಹರಸಾಹಸಪಟ್ಟು ರಾಜ್ಯ ಗಡಿ ಭಾಗಗಳಿಗೆ ಆಗಮಿಸುವ ಜನರು ಅಲ್ಲಿಂದ ವಾಹನ ಪಾಸ್ಗಳ ಮೂಲಕ ರಾಜ್ಯ ಪ್ರವೇಶಿಸುತ್ತಿದ್ದಾರೆ.
ಕೃಷಿ ವಿವಿ ಆವರಣದಲ್ಲಿನ ಆಗಮನ ಕೇಂದ್ರದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಯಾವುದೇ ಸಮಸ್ಯೆ ಆಗದಂತೆ ಕೇಂದ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಕ್ವಾರಂಟೈನ್ಗೆ ಒಳಪಡುವ ಎಲ್ಲ ಜನರ ಸ್ವ್ಯಾಬ್ ಟೆಸ್ಟ್ ಮಾಡಿದ ಬಳಿಕವೇ ಮನೆಗೆ ಕಳುಹಿಸಲಾಗುವುದು. |ಮೋಹನ ಹಂಚಾಟೆ, ನೋಡಲ್ ಅಧಿಕಾರಿ, ಕೃಷಿ ವಿವಿ ಆಗಮನ ಕೇಂದ್ರ