

ಚಾಮರಾಜನಗರ: ಒಂದು ಕಾಲದಲ್ಲಿ ಮಳೆಯಾಗದೆ ಬರದ ಬೇಗೆಯಲ್ಲಿ ಬೇಯುತ್ತಿದ್ದ ಗಡಿಜಿಲ್ಲೆ ಚಾಮರಾಜನಗರ ಈಗ ಪ್ರವಾಹದ ಭೀತಿಯಲ್ಲಿದೆ. ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಗ್ರಾಮಗಳು ಜಲಾವೃತಗೊಂಡಿವೆ. ಬೆಳೆ ನಷ್ಟ, ಆಸ್ತಿ ಹಾನಿಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಹನೂರು ತಾಲೂಕು ಹೊರತುಪಡಿಸಿ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಗುಂಡ್ಲುಪೇಟೆ ತಾಲೂಕುಗಳಲ್ಲಿ ವರುಣಾರ್ಭಟ ಜೋರಾಗಿದೆ. ಇದರಿಂದಾಗಿ ಹಲವು ವರ್ಷಗಳ ಬಳಿಕ ಕೆರೆಗಳು ಕೋಡಿ ಬಿದ್ದಿವೆ. ಕಾಲುವೆಗಳು ಉಕ್ಕಿ ಹರಿಯುತ್ತಿವೆ. ರಸ್ತೆ, ಮನೆ, ಜಮೀನುಗಳಿಗೆ ನೀರು ನುಗ್ಗಿದೆ. ಕೆಲವೆಡೆ ಗ್ರಾಮಗಳು ಜಲಾವೃತವಾಗಿದ್ದು, ಗ್ರಾಮಸ್ಥರಿಗೆ ಜಲ ದಿಗ್ಬಂಧನ ಉಂಟಾಗಿದೆ. ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಚಾಮರಾಜನಗರ ತಾಲೂಕಿನ ಯಡಿಯೂರು ಗ್ರಾಮ ಜಲಾವೃತಗೊಂಡಿದ್ದು, ತೋಟದ ಮನೆಗಳಲ್ಲಿ ಮುಳುಗಡೆಯ ಭೀತಿಯಲ್ಲಿದ್ದ 5 ಜನರನ್ನು ಅಗ್ನಿಶಾಮಕದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಸಂತೇಮರಹಳ್ಳಿ ಬಳಿಯ ಚುಂಗಡಿಪುರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಸೇತುವೆ ಮೇಲೆ ಪ್ರವಾಹವೇ ಬಂದಂತೆ ನೀರು ಹರಿಯುತ್ತಿದೆ. ಗ್ರಾಮದಲ್ಲಿ ನೀರು ಸಂಗ್ರಹವಾಗಿದ್ದು, ಮನೆಗಳು ಹಾಳಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಮಳೆಯಿಂದ ಹಾನಿ ಉಂಟಾಗಿದ್ದು, ಗ್ರಾಮಸ್ಥರಿಗೆ ಸೂಕ್ತ ಪರಿಹಾರ ಕೊಡಿಸಬೇಕೆಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಹೇಶ್ ಪ್ರಸಾದ್ ಒತ್ತಾಯಿಸಿದ್ದಾರೆ.
ಚಾಮರಾಜನಗರದಿಂದ ಕಾಗಲವಾಡಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಕೆರೆ ಕೋಡಿ ಬಿದ್ದಿದ್ದು, ಅಪಾಯದ ಜತೆಗೆ ಸಂಚಾರಕ್ಕೆ ಸಮಸ್ಯೆ ತಂದ್ದೊಡಿದೆ. ಜ್ಯೋತಿಗೌಡನಪುರ ಗ್ರಾಮದ ಬೀದಿಗಳಲ್ಲಿ ಮಳೆ ನೀರು ಹೊಳೆಯಂತೆ ಹರಿಯುತ್ತಿದೆ. ಅಮ್ಮನಪುರ, ತೆಳ್ಳನೂರು ಹಾಗೂ ಇತರ ಗ್ರಾಮಗಳಲ್ಲಿ ನೀರು ತುಂಬಿಕೊಂಡಿದೆ.
ದೇಮಹಳ್ಳಿಯಿಂದ ಕುದೇರು, ಸಂತೇಮರಹಳ್ಳಿಯಿಂದ ಚಾಮರಾಜನಗರ, ಕಾಗಲವಾಡಿಯಿಂದ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು ರಸ್ತೆಗಳಲ್ಲಿ ರಭಸವಾಗಿ ನೀರು ಹರಿಯುತ್ತಿದೆ. ಭರ್ತಿಯಾಗಿರುವ ಸುವರ್ಣಾವತಿ ಜಲಾಶಯದಿಂದ ಹೊರಬಿಟ್ಟಿರುವ ನೀರು ಅಚ್ಚುಕಟ್ಟು ಪ್ರದೇಶಗಳನ್ನು ಜಲಾವೃತಗೊಳಿಸಿದೆ. ಬಸಪ್ಪನ ಪಾಳ್ಯದಲ್ಲಿ ಕಾಲುವೆ ಹೊಡೆದು ಗ್ರಾಮಕ್ಕೆ ನೀರು ನುಗ್ಗಿದೆ.
ಜಿಲ್ಲಾ ಕೇಂದ್ರವಾಗಿರುವ ಚಾಮರಾಜನಗರದಲ್ಲಿ ಮಳೆ ಬಂದರೆ ಜೀತಿ ಸೃಷ್ಟಿಯಾಗುವುದು ತಪ್ಪಿಲ್ಲ. ನಗರದ ಜಿಲ್ಲಾಡಳಿತ ಭವನದ ಎದುರಿನ ರಸ್ತೆಯಲ್ಲಿ ಎಂದಿನಂತೆಯೇ ಮಳೆ ನೀರು ತುಂಬಿಕೊಂಡಿತ್ತು. ಎಲ್‌ಐಸಿ ಕಚೇರಿ ಮತ್ತು ರಿಯಲನ್ಸ್ ಪೆಟ್ರೋಲ್ ಬಂಕ್ ಮುಳುಗಡೆಯಾಗಿತ್ತು. ಪೆಟ್ರೋಲ್ ಶೇಖರಣಾ ಟ್ಯಾಂಕ್‌ಗೆ ನೀರು ನುಗ್ಗಿತ್ತು. ಬಂಕ್ ಒಳಗಿದ್ದ ಸಿಬ್ಬಂದಿಯನ್ನು ಅಗ್ನಿಶಾಮಕ ದಳ ಮತ್ತು ಎನ್.ಡಿ.ಆರ್.ಎ್. ರಕ್ಷಣೆ ಮಾಡಿದೆ. ಇಂದಿರಾ ಕ್ಯಾಂಟೀನ್ ಜಲಾವೃತಗೊಂಡಿತ್ತು. ಚಾಮರಾಜನಗರ -ಮೈಸೂರು ರಸ್ತೆಯಲ್ಲಿ ಮರ ಧರೆಗುರುಳಿ ಸಂಚಾರಕ್ಕೆ ಸಮಸ್ಯೆಯಾಗಿತ್ತು.
ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಗಳಿಗೆ ಮಳೆ ನೀರು ನುಗ್ಗಿ ಜೀತಿ ಸೃಷ್ಟಿಸಿತು. ನಗರದ ನಂದಿಭವನ, ಶ್ರೀಶಿವಕುಮಾರಸ್ವಾಮಿ ಭವನದಲ್ಲಿ ಸೋಮವಾರ ಮದುವೆ ನಡೆಯುತ್ತಿದ್ದವು. ನೆಲ ಮಹಡಿಯಲ್ಲಿದ್ದ ಊಟದ ಹಾಲ್‌ಗೆ ನೀರು ನುಗ್ಗಿ ಆಹಾರ ಪದಾರ್ಥಗಳು ಹಾಳಾದವು. ಮದುವೆಗೆ ಬಂದಿದ್ದ ಸ್ನೇಹಿತರು, ಸಂಬಂಧಿಕರು ಮಳೆಗೆ ಹಿಡಿಶಾಪ ಹಾಕಿದರು.
ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು. ಅಂಗನವಾಡಿ, ಎಲ್‌ಕೆಜಿ ಮತ್ತು ಯುಕೆಜಿ, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ರಜೆ ೋಷಣೆ ಮಾಡಿ ಆದೇಶ ಹೊರಡಿಸಿದ್ದರು.
ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಅಪಾರ ಬೆಳೆ ಹಾನಿ ಸಂಭವಿಸಿದೆ. ಜಮೀನುಗಳಿಗೆ ನೀರು ನುಗ್ಗಿದೆ. ಹೆಬ್ಬಸೂರು ಗ್ರಾಮದ ಜಮೀನಿನಲ್ಲಿ ಅಪಾರ ಪ್ರಮಾಣದ ತೆಂಗಿನಕಾಯಿಗಳು ನೀರಿನಲ್ಲಿ ಕೊಚ್ಚಿ ಹೋದವು. ರೈತರು ಸಾಧ್ಯವಾದಷ್ಟು ಕಾಯಿಗಳನ್ನು ಒಂದೆಡೆ ಸಂಗ್ರಹಿಸಿದರು. ‘ಕಳೆದ 40 ವರ್ಷಗಳಿಂದ ಇಂತಹ ಮಳೆಯನ್ನು ನಾವು ನೋಡಿರಲಿಲ್ಲ. 200ರಿಂದ 300 ಎಕರೆಯಲ್ಲಿ ಬಿತ್ತನೆ ಮಾಡಿದ್ದ ಬೆಳೆ ಹಾನಿಯಾಗಿದೆ. ಮಣ್ಣಿನ ಸವಕಳಿಯಾಗಿದೆ. ಭೂಮಿಯೇ ಕಾಣುತ್ತಿಲ್ಲ. ರೈತರ ಕಷ್ಟ ಕೇಳದಂತಾಗಿದೆ’ ಎಂದು ದೊಡ್ಡರಾಯಪೇಟೆ ಗಿರೀಶ್ ಹೇಳಿದ್ದಾರೆ.