

ಭಾಲ್ಕಿ: ಗಡಿ ಜಿಲ್ಲೆ ಬೀದರ್‌ನಲ್ಲಿ ಅದ್ಭುತ ಪ್ರತಿಭೆಗಳಿದ್ದಾರೆ. ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಝೀ ಕನ್ನಡ ವಾಹಿನಿಯ ಮಹಾನಟಿ ಸ್ಪರ್ಧೆ ೨ರ ಸ್ಪರ್ಧೆಗೆ ಆಯ್ಕೆಯಾಗಿರುವ ದಿವ್ಯಾಂಜಲಿ ಅವರನ್ನು ಆಶೀರ್ವದಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಥೆಯಲ್ಲಿ ಅನ್ನ, ಅಕ್ಷರ, ಆಶ್ರಯ ಪಡೆದಿರುವ ದಿವ್ಯಾಂಜಲಿ ಝೀ ಕನ್ನಡ ನಡೆಸಿ ಕೊಡುವ ಪ್ರತಿಷ್ಠತ ಮಹಾನಟಿ ಸ್ಪರ್ಧೆಗೆ ಆಯ್ಕೆ ಆಗಿರುವುದು ಹೆಮ್ಮೆ ತರಿಸಿದೆ. ಮೊದಲಿನಿಂದಲೂ ದಿವ್ಯಾಂಜಲಿಗೆ ನಾಟಕ, ಕಲೆಯಲ್ಲಿ ಆಸಕ್ತಿ ಹೊಂದಿದ್ದಳು. ಆರನೆಯ ತರಗತಿಯಲ್ಲಿ ಓದುತ್ತಿರುವಾಗಲೇ ಭಗತಸಿಂಗ್ ಪಾತ್ರ ನಿರ್ವಹಿಸಿ ಆ ಪಾತ್ರಕ್ಕೆ ಜೀವ ತುಂಬಿದ್ದಳು. ಅಂದೆ ಅವಳಲ್ಲಿನ ಪ್ರತಿಭೆ ಗುರತಿಸಿದೆ. ಪಿಯುಸಿ ಪೂರ್ಣಗೊಳ್ಳುತ್ತಲೇ ನಾಟಕ, ಕಲೆ ತರಬೇತಿಗಾಗಿ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘ ನಡೆಸುವ ಶಿವಕುಮಾರ ರಂಗಪ್ರಯೋಗ ಶಾಲೆಯ ರಂಗ ಡಿಪ್ಲೊಮಾ ಕೋರ್ಸ್ಗೆ ಸೇರಿಸಲಾಯಿತು. ಅಲ್ಲಿ ಎರಡು ವರ್ಷ ಉತ್ತಮ ತರಬೇತಿ ಪಡೆದು ಮಹಾನಟಿ ಸ್ಪರ್ಧೆಗೆ ಆಯ್ಕೆಯಾಗಿ ತನ್ನ ಅಭಿಯನದ ಮೂಲಕ ರಾಜ್ಯದ ಗಮನ ಸೆಳೆದಿದ್ದಾಳೆ. ಮುಂದೆಯೂ ಎಲ್ಲ ಹಂತದ ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ತೋರಿ ವಿಜಯಶಾಲಿ ಆಗಲಿ ಎಂದು ಹಾರೈಸಿದರು.
ನೇತೃತ್ವ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಸಮಾಜದ ಹಿತಕ್ಕಾಗಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ತಮ್ಮ ಬದುಕು ಮುಡಿಪಾಗಿಟ್ಟಿದ್ದಾರೆ. ಧರ್ಮ ಪ್ರಚಾರ ಪ್ರಸಾರದ ಜತೆಗೆ ಶಿಕ್ಷಣ, ಸಾಹಿತ್ಯ, ಕಲೆ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಅದ್ಭುತ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಆಡಳಿತಾಧಿಕಾರಿ ಮೋಹನ ರೆಡ್ಡಿ, ಎಸ್ಸೆಸ್ಸೆಲ್ಸಿ ಸಂಯೋಜಕ ಪ್ರವೀಣ ಖಂಡಾಳೆ, ಪ್ರೌಢ ಶಾಲೆಯ ಮುಖ್ಯಗುರು ಮಹೇಶ ಮಹಾರಾಜ, ಮಹೇಶ ಕುಲಕರ್ಣಿ ಇತರರಿದ್ದರು. ಲಕ್ಷ್ಮಣ ಮೇತ್ರೆ ನಿರೂಪಣೆ ಮಾಡಿ ವಂದಿಸಿದರು.
ಗಡಿಭಾಗದಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಡವರು, ದಿನ ದುರ್ಬಲ ವರ್ಗದವರು, ನಿರಾಶ್ರತರಿಗೆ ಅನ್ನ, ಅಕ್ಷರ ಜ್ಞಾನ, ಆಶ್ರಯ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ. ದಿವ್ಯಾಂಜಲಿ ಕಲಾ ಕ್ಷೇತ್ರದಲ್ಲಿ ಯಶಸ್ಸು ಕಂಡು ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಲಿ.
| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ