

ಆನೇಕಲ್: ಆನೆಗಳು ಸೇರಿ ಕಾಡುಪ್ರಾಣಿಗಳ ದಾಳಿಯ ಭೀತಿ... ಸಮರ್ಪಕವಾದ ರಸ್ತೆ, ಮೂಲಸೌಕರ್ಯಗಳಿಲ್ಲದೆ ಪರದಾಟ... ಇದು ಆನೇಕಲ್ ತಾಲೂಕಿನಿಂದ 12 ಕಿಮೀ ದೂರದಲ್ಲಿರುವ ಗಡಿ ಗ್ರಾಮ ಚೂಡಹಳ್ಳಿಯ ದುಸ್ಥಿತಿ.
ಇಂಡ್ಲವಾಡಿ ಗ್ರಾಪಂ ವ್ಯಾಪ್ತಿಯಲ್ಲಿರುವ ಚೂಡಹಳ್ಳಿ ತಾಲೂಕಿನಲ್ಲಿ ಇದೆ ಎಂಬುದೇ ಬಹುತೇಕರಿಗೆ ಗೊತ್ತಿಲ್ಲ! ಕಾಡಿನ ಮಧ್ಯೆ ಕಾಲುಹಾದಿಯಂಥ ಮಣ್ಣಿನ ರಸ್ತೆಯಲ್ಲಿ ಸಾಗಿ ತಮ್ಮನಾಯಕನಹಳ್ಳಿ ಮೂಲಕ ಈ ಊರು ತಲುಪಲು ಬಹಳ ಕಷ್ಟಪಡಬೇಕಿದೆ.
ಆ ಊರಿಗೆ ಹೋದರೆ ಪುರಾತನ ಗ್ರಾಮಕ್ಕೆ ಹೋದ ಅನುಭವವಾಗುತ್ತದೆ. ಮಣ್ಣಿನ ಗೋಡೆಯ ಮನೆಗಳು, ಅವುಗಳ ಸುತ್ತ ಕಾಡುಪ್ರಾಣಿಗಳ ತಡೆಗೆ ಅಳವಡಿಸಿರುವ ಬಿದಿರಿನ ಬೇಲಿ, ಬೆಳೆಗಳ ರಕ್ಷಣೆಗಾಗಿ ಹೊಲ-ಗದ್ದೆಗಳಿಗೂ ಅಳವಡಿಸಿರುವ ಬಿದಿರಿನ ಬೇಲಿಗಳು ಕಾಣಿಸುತ್ತವೆ. ಈ ಗ್ರಾಮಕ್ಕೆ ಇಂದಿಗೂ ಬಸ್ ಸಂಪರ್ಕ ಕಲ್ಪಿಸಲಾಗಿಲ್ಲ. ಕನಿಷ್ಠ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲದೆ, ಅನಾರೋಗ್ಯವಾದರೆ, ದೂರದೂರಿಗೆ ಹೋಗಿ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಗ್ರಾಮಸ್ಥರದ್ದಾಗಿದೆ.
ಚೂಡಹಳ್ಳಿಯಲ್ಲಿ 160 ಮನೆಗಳಿದ್ದು, 473 ಜನಸಂಖ್ಯೆ ಇದೆ. ಪಡಿತರ ಪಡೆಯಬೇಕಾದರೆ ದೂರದಲ್ಲಿರುವ ತಮ್ಮನಾಯಕನಹಳ್ಳಿಗೆ ನಡೆದೇ ಬರಬೇಕಿದೆ. ಹಾಗೆಯೇ ಪ್ರಾಥಮಿಕ ಶಾಲೆ ಮಾತ್ರ ಇದ್ದು, 6ನೇ ತರಗತಿ ಮೇಲ್ಪಟ್ಟು ಓದಲು ಆನೇಕಲ್ಗೆ ಹೋಗಬೇಕಿದೆ.
ಮೂಲಸೌಕರ್ಯ ಕಲ್ಪಿಸಿ: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪ್ರಮುಖವಾಗಿ ಆಗಬೇಕು, ಊರಿನ ಸುತ್ತ ರೈಲ್ವೆ ಬ್ಯಾರಿಕೇಡ್ ಹಾಕಿದರೆ ಮಾತ್ರ ಆನೆಗಳಿಂದ ಸುರಕ್ಷಿತವಾಗಿರಲು ಹಾಗೂ ರಕ್ಷಣೆ ಪಡೆದುಕೊಳ್ಳಲು ಸಾಧ್ಯ. ಶುದ್ಧ ನೀರಿನ ವ್ಯವಸ್ಥೆ ಆಗಬೇಕಿದೆ, ಚರಂಡಿ ವ್ಯವಸ್ಥೆ ಇಲ್ಲ, ವಸತಿ ಯೋಜನೆಯಡಿ ಸರ್ಕಾರದಿಂದ ಇದುವರೆಗೂ ಮನೆಗಳು ಸಿಕ್ಕಿಲ್ಲ, ಸರ್ಕಾರಿ ಸೌಲಭ್ಯಗಳು ಸರಿಯಾಗಿ ಗ್ರಾಮಸ್ಥರಿಗೆ ಸಿಗುತ್ತಿಲ್ಲ.
ನಿತ್ಯವೂ ದೀಪಾವಳಿ!: ಕಾಡುಪ್ರಾಣಿಗಳ ದಾಳಿ ತಡೆಯಲು ಚೂಡಹಳ್ಳಿಯ ನಿವಾಸಿಗಳು ನಿತ್ಯವೂ ದೀಪಾವಳಿ ಆಚರಿಸುತ್ತಾರೆ! ದಿನವೂ ಪಟಾಕಿಗಳನ್ನು ಸಿಡಿಸಿ, ಆನೆಗಳು ಸೇರಿ ಕಾಡುಪ್ರಾಣಿಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಾರೆ. ಆದರೂ ಆನೆಗಳ ದಾಳಿ ಮುಂದುವರಿದಿದೆ. ಇದರಿಂದಾಗಿ ಉತ್ತಮ ಬೆಳೆ ಬಂದರೂ ಅದು ಮನೆಗೆ ಬರುತ್ತದೆ ಎಂಬ ಖಚಿತತೆ ಇಲ್ಲ. ಆನೆಗಳ ದಾಳಿ ತಡೆಯಲು ಶಾಶ್ವತ ತಂತಿಬೇಲಿ ನಿರ್ಮಿಸಬೇಕು.
ರಸ್ತೆ ಅಭಿವೃದ್ಧಿಗೆ ನಿಯಮಗಳು ಅಡ್ಡಿ: ಚೂಡಹಳ್ಳಿ ತಲುಪಲು ಅರಣ್ಯ ಪ್ರದೇಶದಲ್ಲಿ ಹಾದು ಹೋಗಬೇಕು. ಈ ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆ ನಿಯಮಗಳು ಅಡ್ಡಿಯಾಗಿವೆ. ಇದರಿಂದಾಗಿ ಇಲ್ಲಿನ ನಿವಾಸಿಗಳ ಗೋಳು ತಪ್ಪದಂತಾಗಿದೆ. ರಸ್ತೆಗೆ ಡಾಂಬರು ಹಾಕಿಲ್ಲವಾದ್ದರಿಂದ, ವಾಹನಗಳ ಸಂಚಾರ ಕಷ್ಟ. ನಿಯಮ ಸಡಿಲಿಸಿ ರಸ್ತೆಗೆ ಡಾಂಬರು ಹಾಕಿಸಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಚೂಡಹಳ್ಳಿಯು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿತ್ತು. ನಾನು ಶಾಸಕನಾದ ಬಳಿಕ ಗ್ರಾಮಕ್ಕೆ ಕೋಟಿಗಟ್ಟಲೆ ಅನುದಾನ ಕೊಟ್ಟು, ಅಭಿವೃದ್ಧಿಪಡಿಸಲು ಪ್ರಯತ್ನಿಸಿದ್ದೇನೆ. ಆದರೆ ಅರಣ್ಯ ಇಲಾಖೆಯ ನಿಯಮಗಳ ತೊಂದರೆಯಿಂದಾಗಿ ಊರಿಗೆ ಹೋಗುವ ರಸ್ತೆಯನ್ನು ಅಭಿವೃದ್ಧಿಪಡಿಸಲು ತೊಡಕಾಗುತ್ತಿದೆ. ಬಿ.ಶಿವಣ್ಣ, ಶಾಸಕ ಚೂಡಹಳ್ಳಿ ಜನರ ಬವಣೆ ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ರಸ್ತೆ ದುರಸ್ತಿ ಹಾಗೂ ಕಾಡಿನ ಪ್ರಾಣಿಗಳು ಗ್ರಾಮದತ್ತ ಬರದಂತೆ ತಡೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದೂರು ಪ್ರಕಾಶ್, ಗ್ರಾಪಂ ಸದಸ್ಯ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗುವುದೇ ಅಪರೂಪವಾಗಿದೆ. ಕಾಡುಪ್ರಾಣಿಗಳು ಗ್ರಾಮದತ್ತ ಬರದಂತೆ ಅರಣ್ಯ ಇಲಾಖೆ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳಬೇಕು. ತುರ್ತಾಗಿ ಆಸ್ಪತ್ರೆಗೆ ಹೋಗಬೇಕು ಎಂದರೆ ಆನೇಕಲ್‌ಗೇ ಬರಬೇಕು. ರಾತ್ರಿ ಸಮಯದಲ್ಲಿ ತೊಂದರೆಯಾದರೆ, ವಾಹನಗಳು ಸಿಗುವುದಿಲ್ಲ. ಗ್ರಾಮದಲ್ಲಿ ಆಸ್ಪತ್ರೆ ತೆರೆಯಬೇಕು. ರಾಮಸ್ವಾಮಿ, ಗ್ರಾಮಸ್ಥ