ಗಡಿಭಾಗದ ಕನ್ನಡ ಶಾಲೆ ಮುಚ್ಚುವ ಹುನ್ನಾರ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಶಾಂತಲಿಂಗ ಶ್ರೀಗಳ ಆಕ್ರೋಶ

19 NRD-5- SHANTALINGA SHREE
Published on

ನರಗುಂದ: ಗಡಿಭಾಗದ ಕನ್ನಡ ಮಾಧ್ಯಮ ಶಾಲೆಗಳನ್ನು ಮೂಲೆಗುಂಪು ಮಾಡುವ ಹುನ್ನಾರ ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರ ಮತ್ತೆ ತನ್ನ ಕುಹಕ ಬುದ್ದಿಯನ್ನು ತೋರಿಸುತ್ತಿದೆ. ಕನ್ನಡವನ್ನೇ ಅಧಿಕ ಮಾತನಾಡುವ ಸಾಂಗ್ಲಿ, ಸೊಲ್ಲಾಪೂರ ಜಿಲ್ಲೆಗಳ 250ಕ್ಕೂ ಹೆಚ್ಚು ಗ್ರಾಮಗಳ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮರಾಠಿ ಭಾಷೆ ಶಿಕ್ಷಕರನ್ನು ನೇಮಿಸುತ್ತಿರುವ ಮಾಹಾರಾಷ್ಟ್ರ ಸರ್ಕಾರದ ನಡೆ ಖಂಡನೀಯವಾದುದು. ಇದರ ವಿರುದ್ಧ ಕರ್ನಾಟಕ ಸರ್ಕಾರ ಕಾನೂನು ಹೋರಾಟದ ಮೂಲಕ ಕನ್ನಡಿಗರ ಮಕ್ಕಳ ಹಿತ ಕಾಪಾಡಬೇಕಿದೆ ಎಂದು ಭೈರನಹಟ್ಟಿ ಮಠದ ಶಾಂತಲಿಂಗ ಶ್ರೀಗಳು ಒತ್ತಾಯಿಸಿದರು.


ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2002-03ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಮಂಗಳವಾರ ಏರ್ಪಡಿಸಿದ್ದ ಗುರುವಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.


ಪ್ರತಿ ವಿಷಯದಲ್ಲಿಯೂ ಕನ್ನಡಿಗರನ್ನು ಕೆಣಕುತ್ತಿರುವ ಮಹಾರಾಷ್ಟ್ರ ಈಗ ಮತ್ತೆ ಕನ್ನಡ ಮಕ್ಕಳಿರುವ ಶಾಲೆಗಳ ಮೇಲೆ ಸವಾರಿ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡಿಗರಿಗೆ ಬೆನ್ನೆಲುಬಾಗಿ ನಿಂತು ಗಡಿಭಾಗದ ಕನ್ನಡ ಶಾಲೆಗಳನ್ನು ಕಾಪಾಡಬೇಕು. ಇಲ್ಲದಿದ್ದರೆ ಗಡಿ ಭಾಗದ ಕನ್ನಡ ಶಾಲೆಗಳು ಸಂಪೂರ್ಣ ನಶಿಸಿ ಹೋಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.


ಶಿಕ್ಷಕ ಆರ್.ಆರ್. ಕಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯೆಗೆ ವಿನಯವೇ ಭೂಷಣ ಎಂಬಂತೆ ನಾವು ಏನು ಓದಿದ್ದೇವೆ ಎನ್ನುವುದಕ್ಕಿಂತ ನಮ್ಮಲ್ಲಿ ಸಂಸ್ಕಾರ- ಸಂಸ್ಕೃತಿ ಎಷ್ಟಿದೆ ಎನ್ನುವುದು ಅತೀ ಮುಖ್ಯವಾಗುತ್ತದೆ ಎಂದರು. ಶಿಕ್ಷಕರಾದ ಎಸ್.ಎ. ಭಜಂತ್ರಿ, ಸಿ.ಎಸ್. ಜಗಾಪೂರ, ಎನ್.ವೈ. ಪಾಟೀಲ, ವೈ.ಆರ್. ಬಸಿಡೋಣಿ, ಆರ್.ಆರ್. ಕಟ್ಟಿ ಅವರಿಗೆ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ ಸಲ್ಲಿಸಲಾಯಿತು. ನಿವೃತ್ತ ಶಿಕ್ಷಕ ವೀರಯ್ಯ ಸಾಲಿಮಠ, ಶರಣಯ್ಯ ಕೊಣ್ಣೂರಮಠ, ದ್ಯಾಮನಗೌಡ ಪಾಟೀಲ, ಸುರೇಶ ಐನಾಪೂರ, ಈಶ್ವರ ಕೀಲಿಕೈ, ಕವಿತಾ ಬಡಿಗೇರ, ನಿಂಗಮ್ಮ ಐನಾಪೂರ, ಸುನಿತಾ ತೆಗ್ಗಿನಮನಿ, ಭೀಮವ್ವ ಈರನಗೌಡ್ರ, ನೀಲಪ್ಪ ದಂಡಿನ, ಶಿವಾನಂದ ಬೆನ್ನೂರ, ರಾಘವೇಂದ್ರ ಬಡಿಗೇರ ಉಪಸ್ಥಿತರಿದ್ದರು. ಪ್ರೇಮಾ ಮನೇನಕೊಪ್ಪ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net