

ಹುಬ್ಬಳ್ಳಿ: ಅವಳಿ ನಗರದಲ್ಲಿ ಮಳೆಗಾಲ ಪೂರ್ವ ಸಿದ್ಧತೆಯಾಗಿ ಗಟಾರದಲ್ಲಿನ ಹೂಳೆತ್ತುವ ಕೆಲಸವನ್ನು ಹು-ಧಾ ಮಹಾನಗರ ಪಾಲಿಕೆ ಆರಂಭಿಸಿದೆ. ಹುಬ್ಬಳ್ಳಿಯಲ್ಲಿ ಸದರಸೋಫಾ, ಶಿಗ್ಗಾಂವ ಪಾರ್ಕ್, ತೊರವಿಹಕ್ಕಲ ದೋಭಿಘಾಟ್, ಧಾರವಾಡದಲ್ಲಿ ಚನ್ನಬಸವೇಶ್ವರನಗರ, ಇನ್ನಿತರ ಕಡೆ ಗಟಾರದಲ್ಲಿನ ಕಸ-ಕಡ್ಡಿ, ಕೊಳಚೆ, ಮಣ್ಣು, ಇತ್ಯಾದಿ ತ್ಯಾಜ್ಯಗಳನ್ನು ಹೊರ ತೆಗೆಯಲಾಯಿತು. ಮಳೆ ನೀರು ಸರಾಗವಾಗಿ ಹರಿದು ಹೋಗಲು ಹೊಳೆತ್ತಲಾಗಿದೆ. ಇತ್ತೀಚೆಗೆ ಕೆಲ ದಿನಗಳು ಸುರಿದ ಮಳೆಯಿಂದ ಅವಳಿ ನಗರದ ವಿವಿಧೆಡೆ ಗಟಾರಗಳು ಬ್ಲಾಕ್ ಆಗಿ ನೀರು ರಸ್ತೆಯಲ್ಲಿ ನಿಂತಿತ್ತು. ದೊಡ್ಡ ಮಳೆಯಾದರೆ ತಗ್ಗು ಪ್ರದೇಶಗಳಿಗೆ ನುಗ್ಗುವ ಅಪಾಯವಿದೆ. ಭಾನುವಾರ ಸಂಪೂರ್ಣ ಲಾಕ್ಡೌನ್ ಹಿನ್ನೆಲೆಯಲ್ಲಿ ಗಟಾರ ಹೂಳೆತ್ತುವ ಕೆಲಸ ಸರಾಗವಾಗಿ ನಡೆದಿದೆ. ಅವಳಿ ನಗರದಲ್ಲಿ ಯಂತ್ರದ ಮೂಲಕ ನಾಲಾ ಹೂಳೆತ್ತುವ ಕೆಲಸ ಮುಂದುವರಿದಿದೆ.