ಗಜಪಡೆ ಭಾರ ಹೊರುವ ತಾಲೀಮು ಸೆ.1 ರಿಂದ ಪ್ರಾರಂಭ

Dasara elephants start carrying load from September 1
Published on

ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆ ಯಶಸ್ವಿಗೊಳಿಸಲು ನಗರದಲ್ಲಿ ಪ್ರತಿನಿತ್ಯ ತಾಲೀಮು ನಡೆಸುತ್ತಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ ಭಾನುವಾರದಿಂದ ಭಾರ ಹೊರುವ ತಾಲೀಮು ಪ್ರಾರಂಭಿಸಲಿದೆ.

ಅರಮನೆ ಆವರಣದ ಆನೆ ಶಿಬಿರದಲ್ಲಿ ಭಾನುವಾರ ಬೆಳಗ್ಗೆ 7.15ಕ್ಕೆ ಪೂಜೆ ಸಲ್ಲಿಸಿದ ನಂತರ ಭಾರ ಹೊರುವ ತಾಲೀಮು ಪ್ರಾರಂಭಗೊಳ್ಳಲಿದೆ. ಮೊದಲ ಹಂತದಲ್ಲಿ 500 ಕೆ.ಜಿ. ಭಾರ ಹೊರಿಸುವ ಉದ್ದೇಶ ಹೊಂದಲಾಗಿದೆ. ಮೊದಲ ದಿನ ಅಂಬಾರಿ ಆನೆ ಅಭಿಮನ್ಯು ವಿಗೆ ಭಾರ ಹೊರಿಸಲಾಗುವುದು. ನಂತರ ದಿನಗಳಲ್ಲಿ ಉಳಿದ ಆನೆಗಳಿಗೆ ಭಾರ ಹೊರಿಸುವ ತಾಲೀಮು ನಡೆಯಲಿದೆ.

ಪ್ರಸ್ತುತ ಗಜಪಡೆ ಪ್ರತಿನಿತ್ಯ ಅರಮನೆಯಿಂದ ಬನ್ನಿಮಂಟಪದವರೆಗೆ ನಡಿಗೆಯ ತಾಲೀಮು ನಡೆಸುತ್ತಿದೆ. ಭಾನುವಾರ ಹಮ್ಮಿಕೊಂ ಡಿರುವ ಭಾರ ಹೊರುವ ತಾಲೀಮು ಎಲ್ಲಿಯವರೆಗೆ ನಡೆಯಲಿದೆ ಎಂಬ ಸ್ಪಷ್ಟತೆ ಇಲ್ಲ. ಆನೆಯ ಭಾರ ಹೊರುವ ಸಾಮರ್ಥ್ಯ ಹಾಗೂ ಅದರ ವರ್ತನೆ ಗಮನಿಸಿ ಎಷ್ಟು ದೂರ ಸಾಗಬೇಕು ಎಂಬುದನ್ನು ನಿರ್ಧರಿಸಲಾಗುವುದು. ಆನೆಗೆ ಯಾವುದೇ ರೀತಿಯ ಆಯಾಸ ಕಂಡು ಬಾರದೆ ಇದ್ದರೆ ಬನ್ನಿಮಂಟಪದವರೆಗೆ ತಾಲೀಮು ನಡೆಸಲು ಉದ್ದೇಶಿಸಲಾಗಿದೆ.

ಮತ್ತಿಗೋಡು ಆನೆ ಶಿಬಿರದ ಅಂಬಾರಿಆನೆ ಅಭಿಮನ್ಯು ನೇತೃತ್ವದಲ್ಲಿ ಮತ್ತಿಗೋಡು ಶಿಬಿರದ ಏಕಲವ್ಯ ಮತ್ತು ಭೀಮ, ರಾಮಪುರದ ಲಕ್ಷ್ಮೀ, ಭೀಮನಕಟ್ಟೆಯ ವರಲಕ್ಷ್ಮೀ, ರಾಮಪುರದ ರೋಹಿತ್, ದುಬಾರೆ ಶಿಬಿರದ ಕಂಜನ್, ಧನಂಜಯ ಹಾಗೂ ಗೋಪಿ ಆನೆಗಳು ಆ.21 ರಂದು ವೀರನಹೊಸಳ್ಳಿಯಿಂದ ನಗರಕ್ಕೆ ಆಗಮಿಸಿ ಅರಣ್ಯ ಭವನದಲ್ಲಿ ಬೀಡುಬಿಟ್ಟು ನಂತರ ಆ.23 ರಂದು ಅರಮನೆ ಪ್ರವೇಶಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net