ಗಚ್ಚಿನಮಠದ ಅನ್ನದಾಸೋಹ ನಿರಂತರ

1Athani1
Published on

ಅಥಣಿ: ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ನಂತರದಲ್ಲಿ ದಾಸೋಹ ಪರಂಪರೆಯನ್ನು ಸಿದ್ದಲಿಂಗ ಅಪ್ಪಗಳು ಮುಂದುವರೆಸಿಕೊಂಡು ಬಂದಿರುವುದರಿಂದ ಇಂದಿಗೂ ಗಚ್ಚಿನಮಠದ ಅನ್ನದಾಸೋಹ ನಿರಂತರವಾಗಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಲಿಂ. ಸಿದ್ದಲಿಂಗ ಸ್ವಾಮೀಜಿ ಸ್ಮರಣೋತ್ಸವ ನಿಮಿತ್ತ ಶನಿವಾರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಬಡಮಕ್ಕಳಿಗೆ ನೆರವಾಗಲು ಅರಿವು, ಅನ್ನ, ಆಶ್ರಯ ಕಲ್ಪಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲತೆ ಒದಗಿಸಿದರು. ಪರ ಊರುಗಳಿಂದ ಬರುವ ಭಕ್ತಾದಿಗಳಿಗೂ ವಿಶೇಷ ದಾಸೋಹದ ವ್ಯವಸ್ಥೆ ಕಲ್ಪಿಸಿದ್ದರಿಂದಲೇ ಇಂದಿಗೂ ಶ್ರೀಮಠ ಅದೇ ಪರಂಪರೆ ಮುನ್ನಡೆಸಿದೆ ಎಂದರು.

ಮಹಾಂತ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಶಿವಯೋಗಿಗಳು ಇಚ್ಛಾಶಕ್ತಿಯಾದರೆ- ಸಿದ್ದಲಿಂಗಪ್ಪಗಳು ಕ್ರಿಯಾಶಕ್ತಿಯಾಗಿದ್ದರು. ಹೀಗಾಗಿ ಗಚ್ಚಿನಮಠದ ಎರಡು ಮಹಾಶಕ್ತಿಗಳಾಗಿ ಧಾರ್ಮಿಕ ಲೋಕದ ಸಾಂಸ್ಕೃತಿಕ ನಾಯಕರಾಗಿ ಮುರುಘೇಂದ್ರ ಶಿವಯೋಗಿಗಳು ನಾಡಿಗೆ ಬೆಳಕಾಗಿದ್ದಾರೆ ಎಂದರು.

ಪಲ್ಲಕ್ಕಿ ಉತ್ಸವ: ಲಿಂ.ಸಿದ್ದಲಿಂಗ ಸ್ವಾಮೀಜಿ ಅವರ ಸ್ಮರಣೋತ್ಸವ ಅಂಗವಾಗಿ ಬೆಳಗ್ಗೆ ಗದ್ದುಗೆ ವಚನಾಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಸಿದ್ದಲಿಂಗ ಅಪ್ಪಗಳ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿಟ್ಟು ಸಮಗ್ರ ವಚನ ಸಂಪುಟಗಳೊಂದಿಗೆ, ಸಕಲವಾದ್ಯವೃಂದದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ಸಾಗಿ ಶ್ರೀಮಠ ತಲುಪಿತು. ನಂತರ ಎಲ್ಲರಿಗೂ ಮಹಾಪ್ರಸಾದ ವಿತರಣೆ ನಡೆಯಿತು. ಮಲ್ಲಿಕಾರ್ಜುನ ಸ್ವಾಮೀಜಿ, ಮಹಾಂತ ದೇವರು, ವಿರೇಶ್ವರ ದೇವರು, ಆನಂದ ದೇವರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net