ಗಂಭೀರ ಸಮಸ್ಯೆಯಿರುವ ಶಿಕ್ಷಕರಿಗೆ ಚುನಾವಣೆ ಕರ್ತವ್ಯ ವಿನಾಯಿತಿ ನೀಡಿ

serious problem, teacher, election duty, muddebihala,
ಮುದ್ದೇಬಿಹಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿ ಡಾ.ರಾಜಶೇಖರ ವಿಲಿಯಮ್ಸ್, ತಹಸೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಿದರು. ಬಿ.ಎಚ್.ಮುದ್ನೂರ, ಎನ್.ಎಸ್.ತುರಡಗಿ, ಬಿ.ಎಸ್.ಹೊಳಿ, ಎಸ್.ಜಿ.ಪಾಟೀಲ, ಎಸ್.ಎಂ.ಕಟ್ಟಿಮನಿ ಇತರರಿದ್ದರು.
Published on

ಮುದ್ದೇಬಿಹಾಳ: ಆರೋಗ್ಯವೂ ಸೇರಿ ವಿವಿಧ ಗಂಭೀರ ಸಮಸ್ಯೆಗಳಿಂದ ಬಳಲುತ್ತಿರುವ ಶಿಕ್ಷಕರಿಗೆ ಲೋಕಸಭೆ ಚುನಾವಣೆಯ ಕರ್ತವ್ಯದಿಂದ ವಿನಾಯಿತಿ ನೀಡಬೇಕು ಎಂದು ಕೋರಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ ಪದಾಧಿಕಾರಿಗಳು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಎಆರ್‌ಒ- ಜಂಟಿ ಕೃಷಿ ನಿರ್ದೇಶಕ ಡಾ.ರಾಜಶೇಖರ ವಿಲಿಯಮ್ಸ್ ಹಾಗೂ ಎಇಆರ್‌ಒ- ತಹಸೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಿದರು.

ಗಂಭೀರ ಅಥವಾ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು, ಅಂಗವಿಕಲರು, ಎರಡು ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ಶಿಕ್ಷಕಿಯರು, ತೀವ್ರತರನಾದ ಮಧುಮೇಹ, ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿರುವವರು, 55 ವರ್ಷ ಮೇಲ್ಪಟ್ಟವರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲು ಈಗಿನಿಂದಲೇ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಈಗಾಗಲೇ ನಿಯೋಜಿಸಿದ್ದರೆ ಅಂಥವರನ್ನು ಕರ್ತವ್ಯದಿಂದ ಕೈಬಿಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಚುನಾವಣಾ ಕರ್ತವ್ಯ ಮತ್ತು ಮತದಾನ ಕೇಂದ್ರಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಿರುವ ಶಿಕ್ಷಕರೂ ಸೇರಿ ಎಲ್ಲ ಸಿಬ್ಬಂದಿಗೆ ಅವರು ಕರ್ತವ್ಯ ನಿಭಾಯಿಸುವ ಸ್ಥಳಗಳಲ್ಲಿ ಅಗತ್ಯ ಮೂಲಸೌಕರ್ಯಗಳಾದ ಕುಡಿಯುವ ನೀರು, ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ ಮಾತನಾಡಿ, 2019ರ ಮೇ ತಿಂಗಳಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಮುದ್ದೇಬಿಹಾಳದಿಂದ ಬೇರೆ ತಾಲೂಕುಗಳಿಗೆ ಮತದಾನ ಕರ್ತವ್ಯಕ್ಕೆ ತೆರಳುತ್ತಿದ್ದ ಸಿಬ್ಬಂದಿಗಳಿದ್ದ ಸಾರಿಗೆ ಸಂಸ್ಥೆಯ ಬಸ್ ಎಕ್ಸಲ್ ತುಂಡಾಗಿ ರಸ್ತೆ ಬದಿ ತಗ್ಗಿನಲ್ಲಿ ನುಗ್ಗಿ ಅಪಘಾತ ಸಂಭವಿಸಿದಾಗ ಗಾಯಗೊಂಡಿದ್ದ ಹಲವು ಶಿಕ್ಷಕರಿಗೆ ಸಂಬಂಧಿಸಿದ ಅಧಿಕಾರಿಗಳು ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ತೊಂದರೆಗೊಳಗಾದ ಶಿಕ್ಷಕರಿಗೆ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ನೊಂದ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಸ್.ತುರಡಗಿ, ಬಿ.ಎಸ್.ಹೊಳಿ, ಎಸ್.ಜಿ.ಪಾಟೀಲ, ಎಸ್.ಎಂ.ಕಟ್ಟಿಮನಿ, ಎಂ.ಬಿ.ಗುಡಗುಂಟಿ, ಎಸ್.ಎಸ್.ಕುಂಬಾರ, ಬಿ.ಎಚ್.ಭಗವತಿ, ಎಸ್.ಎಸ್.ಪಾಟೀಲ, ಬಿ.ಎಚ್.ನಾಗರಬೆಟ್ಟ, ಜಿ.ಜೆ.ಪಾದಗತ್ತಿ, ಬಿ.ಬಿ.ನರಸಣಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net